ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಅಡ್ಡೂರು ವತಿಯಿಂದ ಮನವಿ

ಗುರುಪುರ, ಫೆ. 6: ಅಡ್ಡೂರು ಸಮೀಪದ ನೂಯಿ ಪ್ರದೇಶದಲ್ಲಿ ತಲೆದೂರಿರುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಅಡ್ಡೂರು ಗ್ರಾಮ ಸಮಿತಿ ವತಿಯಿಂದ ಗುರುಪುರ ಗ್ರಾ.ಪಂ. ಪಿಡಿಒಗೆ ಇಂದು ಮನವಿ ಸಲ್ಲಿಸಲಾಯಿತು.
“ನೂಯಿಯಲ್ಲಿ ಕಳೆದ ಒಂದು ವಾರಗಳಿಂದ ಸರಿಯಾಗಿ ನೀರು ಪೂರೈಕೆಯಾಗದ ಕಾರಣ ಇಲ್ಲಿನ ನಿವಾಸಿಗಳು ಸಂಕಷ್ಟಕೀಡಾಗಿದ್ದಾರೆ. ಈ ಬಗ್ಗೆ ಪಂಚಾಯತ್ ಸದಸ್ಯರ ಗಮನಕ್ಕೆ ತಂದರೆ ನಿರ್ಲಕ್ಷ್ಯ ವಹಿಸುತ್ತಿದ್ದು, ಇಲ್ಲಿಯ ಜನರು ನೀರಿಲ್ಲದೆ ಪರದಾಡುವಂತಾಗಿದೆ. ಅಲ್ಲದೆ, ಇಲ್ಲಿರುವ ಪಂಪ್ ಶೆಡ್ಡಿಗೆ ಮುಚ್ಚಳಿಕೆ ಇಲ್ಲದ್ದರಿಂದ ನೀರು ಕಲುಷಿತಗೊಂಡಿದ್ದು, ಇದರಿಂದಾಗಿ ಮಾರಕ ರೋಗ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮುಂದಿನ 3 ದಿನಗಳೊಳಗಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮಸ್ಥರನ್ನು ಒಗ್ಗೂಡಿಸಿ ಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಅಡ್ಡೂರು ಗ್ರಾಮ ಸಮಿತಿ ಅಧ್ಯಕ್ಷ ಎ.ಕೆ. ಮುಸ್ತಫಾ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಅಡ್ಡೂರು ಗ್ರಾಮ ಸಮಿತಿ ಅಧ್ಯಕ್ಷ ಎ.ಕೆ.ಮುಸ್ತಫಾ, ಶರಿಫ್ ಗೋಳಿಪಡ್ಪು, ಹಕೀಂ ಪಾಂಡೇಲ್, ನಿಯಾಝ್ ತೋಕೂರು, ಅನ್ವರ್ ಗೋಳಿಪಡ್ಪು, ಜಬ್ಬಾರ್ ಕುಚ್ಚಿಗುಡ್ಡೆ, ಇಮ್ರಾನ್, ಸಂಶುದ್ದೀನ್ ಹಾಗೂ ನೂಯಿ ಪರಿಸರದ ಗ್ರಾಮಸ್ಥರು ಉಪಸ್ಥಿತರಿದ್ದರು.







