ಬಿಜೆಪಿಗೆ ಮುಂದಿನ ದಿನಗಳಲ್ಲಿ ಜನತೆ ಬುದ್ದಿ ಕಲಿಸಲಿದ್ದಾರೆ: ಸಚಿವ ಶ್ರೀನಿವಾಸ್

ಹಾಸನ,ಫೆ.6: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಫೆ.8 ರಂದು ಒಳ್ಳೆಯ ಜನಪರ ಬಜೆಟ್ ಮಂಡಿಸಲಿದ್ದಾರೆ ಎಂದು ಸಣ್ಣ ಕೈಗಾರಿಕಾ ಸಚಿವ ಶ್ರೀನಿವಾಸ್ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಏನೇ ಪ್ರಯತ್ನ ಮಾಡಿದರೂ ಸಮ್ಮಿಶ್ರ ಸರ್ಕಾರ ಉರುಳಿಸಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.
ಕಾಂಗ್ರೆಸ್ ನ ಕೆಲ ಶಾಸಕರು ಅಸಮಾಧಾನಗೊಂಡಿದ್ದರು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೊಡನೆ ಚರ್ಚಿಸಿದ್ದಾರೆ. ಕಾಂಗ್ರೆಸ್‍ನ ಮೂವರು ಶಾಸಕರನ್ನು ಸಮನ್ವಯ ಸಮಿತಿ ಕರೆತರಲಿದೆ. ನಮ್ಮ ಪಕ್ಷದ ಎಲ್ಲಾ ಶಾಸಕರು ನಮ್ಮೊಟ್ಟಿಗಿದ್ದಾರೆ. ಯಡಿಯೂರಪ್ಪ ಸಿ.ಎಂ ಆದ ಸಂದರ್ಭದಿಂದಲೂ ಪ್ರಜಾಪ್ರಭುತ್ವದ ವಿರುದ್ಧವಾಗಿ ಇದ್ದಾರೆ ಎಂದು ಆರೋಪಿಸಿದರು.
ಫೆ.8 ರಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಳ್ಳೆಯ ಜನಪರ ಬಜೆಟ್ ಮಂಡಿಸಲಿದ್ದಾರೆ. ವಿರೋಧ ಪಕ್ಷದವರು ಸರ್ಕಾರ ಪತನಗೊಳಿಸುವಲ್ಲಿ ವಿಫಲರಾಗುತ್ತಾರೆ ಎಂದ ಅವರು, ಇಂದಿನ ಬಿಜೆಪಿ ಶಾಸಕರ ನಡೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ದೂರಿದರು. ಬಿಜೆಪಿ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ ಗೌರವ ಹಾಗೂ ಮಾನ-ಮಾರ್ಯಾದೆ ಇಲ್ಲ. ಆಪರೇಷನ್ ಕಮಲ ಎಂಬ ಕೆಟ್ಟ ಸಂಸ್ಕೃತಿಯಿಂದ ಪ್ರಜಾಪ್ರಭುತ್ವ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜನತೆ ಬಿಜೆಪಿಯವರಿಗೆ ಸಂಪೂರ್ಣ ಬಹುಮತ ನೀಡಿಲ್ಲ. ಆದ್ದರಿಂದ ಅವರು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಯಾವುದೇ ಕಾರಣಕ್ಕೂ ಸರ್ಕಾರ ಅಲ್ಪಮತಕ್ಕೆ ಕುಸಿಯುವುದಿಲ್ಲ. ಎಲ್ಲಾ ಶಾಸಕರು ಬಜೆಟ್ ಮಂಡನೆ ವೇಳೆ ಹಾಜರಿರಲಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿರುವ ಬಿಜೆಪಿ ಶಾಸಕರು ಬಜೆಟ್ ಮಂಡನೆಗೂ ಅಡ್ಡಿ ಪಡಿಸುತ್ತಾರೆ. ಪ್ರಜಾಪ್ರಭುತ್ವದ ವಿರುದ್ಧ ಕೆಲಸಗಳನ್ನು ಬಿಜೆಪಿ ಮಾಡಲಿದ್ದು, ಮುಂದಿನ ದಿನಗಳಲ್ಲಿ ಜನರು ಇವರಿಗೆ ಬುದ್ದಿ ಕಲಿಸಲಿದ್ದಾರೆ ಎಂದರು.
ಸಿಎಂ ಕುಮಾರಸ್ವಾಮಿ ಅಧಿಕಾರಿಗಳು, ರೈತರು, ಜನಸಾಮಾನ್ಯರೊಂದಿಗೆ ಚರ್ಚಿಸಿದ್ದಾರೆ. ನಾಡಿದ್ದು ಒಳ್ಳೆಯ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿರುವುದು ಬಿಜೆಪಿಯವರಿಗೆ ಶೋಭೆ ತರುವುದಿಲ್ಲ ಎಂದು ಹೇಳಿದರು. ಇನ್ನು ಸರ್ಕಾರಿ ನೌಕರರ ವಯೋಮಿತಿ ಏರಿಕೆಗೆ ವೈಯುಕ್ತಿಕ ವಿರೋಧವಿದೆ. ಇದರಿಂದಾಗಿ ಯುವ ವಿದ್ಯಾವಂತರಿಗೆ ಉದ್ಯೋಗ ಸಿಗುವುದಿಲ್ಲ. ಆದ್ದರಿಂದ ನಿವೃತ್ತಿ ವಯೋಮಿತಿ ಹೆಚ್ಚಳ ಸರಿಯಲ್ಲ ಎಂದು ಸರ್ಕಾರದ ತೀಮಾರ್ನಕ್ಕೆ ವೈಯುಕ್ತಿಕ ವಿರೋಧ ವ್ಯಕ್ತಪಡಿಸಿದರು.
ತೆಂಗು ಬೆಳೆ ಅಭಿವೃದ್ದಿಗಾಗಿ ಕಲ್ಪತರು ಕಾಯಕ ಯೋಜನೆ ಜಾರಿಗೆ ತರಲಾಗುವುದು. ಕೇರಳ ಹಾಗೂ ತಮಿಳುನಾಡು ಮಾದರಿಯಲ್ಲಿ ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಿ ಸಿದ್ದತೆ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ತೆಂಗು ನಾರಿನ ಘಟಕಗಳನ್ನು ತೆರೆದು ಯುವಕರು ಹಾಗು ಮಹಿಳಾ ಸಂಘಗಳನ್ನು ಸಹಾಯಕ್ಕೆ ಪಡೆದುಕೊಂಡು ಅಭಿವೃದ್ದಿ ಪಡಿಸಲಾಗುವುದು. ರಾಜ್ಯದ ಸುಮಾರು 13 ಜಿಲ್ಲೆಯ 74 ತಾಲೂಕುಗಳಲ್ಲಿ ತೆಂಗು ಬೆಳೆಯಲಾಗುತ್ತಿದೆ. ಆದ್ದರಿಂದ ತೆಂಗು ಬೆಳೆ ಅಭಿವೃದ್ದಿ ಬಗ್ಗೆ ಈ ಬಾರಿ ಬಜೆಟ್‍ನಲ್ಲಿ ಮುಖ್ಯಮಂತ್ರಿ ಹೆಚ್ಚಿನ ಆದ್ಯತೆ ನೀಡಲಿದ್ದು, ಈ ಯೋಜನೆ ಘೋಷಣೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಲವರು ಕೈಗಾರಿಕ ಪ್ರದೇಶಗಳಲ್ಲಿ ಕೈಗಾರಿಕೆ ನಡೆಸಲು ಜಮೀನು ಖರೀದಿ ಮಾಡಿದ್ದು, ಬೇರೆ ಉದ್ಯಮ ಮಾಡುತ್ತಿದ್ದಾರೆ. ಈ ಬಗ್ಗೆ ಇಲಾಖೆ ಕ್ರಮವಹಿಸಲಿದ್ದು, ಅಂತಹ ಜಮೀನನನ್ನು ವಶಪಡೆದುಕೊಳ್ಳಲಾಗುವುದು ಎಂದರು.
ಕೈಗಾರಿಕಾ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಅವಕಾಶ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಕೈಗಾರಿಕೆ ತೆರೆಯಲಾಗಿರುವುದು. ಈ ಬಗ್ಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಗಮನ ಹರಿಸಲಾಗುವುದು ಎಂದರು.







