ಬಂದೂಕು ಸಾಗಣೆ ಕಾರ್ಖಾನೆ ಅಧಿಕಾರಿಯ ಹತ್ಯೆ: ಮರಣೋತ್ತರ ಪರೀಕ್ಷೆಯಿಂದ ಬಯಲು
ಬೊಫೋರ್ಸ್ ತನಿಖೆ

ಭೋಪಾಲ,ಫೆ.6: ಬಂದೂಕು ಸಾಗಾಣೆ ಕಾರ್ಖಾನೆ (ಜಿಸಿಎಫ್)ಯ ಜಬಲ್ಪುರ ಕಚೇರಿಯಲ್ಲಿ ಕಿರಿಯ ಪ್ರಬಂಧಕರಾಗಿ ಕೆಲಸ ಮಾಡುತ್ತಿದ್ದ ಶಾರದ ಚರಣ್ ಕತುವಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬುಧವಾರ ದೊರೆತ ಮರಣೋತ್ತರ ಪರೀಕ್ಷೆ ವರದಿಯಿಂದ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕತುವಾ ಬಳಿ ಬೊಫೋರ್ಸ್ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಗಳು ಇದ್ದವು ಎಂದು ನಂಬಲಾಗಿತ್ತು. ಸದ್ಯ ನಾವು ಕೊಲೆ ಪ್ರಕರಣ ದಾಖಲಿಸಿದ್ದೇವೆ. ಮೃತರ ತಲೆಯ ಮೇಲಿರುವ ಗಾಯ ಯಾವುದೋ ಹರಿತವಾದ ಆಯುಧದಿಂದ ಮಾಡಲಾಗಿದೆ ಎಂದು ಜಬಲ್ಪುರ ಎಸ್‌ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ. ಜನವರಿ 17ರಿಂದ ನಾಪತ್ತೆಯಾಗಿದ್ದ ಕತುವಾರ ಮೃತದೇಹ ಮಂಗಳವಾರ ನಗರದ ಜನವಸತಿಯಿಲ್ಲದ ಪ್ರದೇಶದಲ್ಲಿ ಪತ್ತೆಯಾಗಿತ್ತು. “ದೇಶದ್ರೋಹಿಗಳು ನನ್ನ ಸಹೋದರನನ್ನು ಹತ್ಯೆ ಮಾಡಿದ್ದಾರೆ. ಅವರು ಸಿಬಿಐ ತನಿಖೆಗೆ ಸಹಕರಿಸುತ್ತಿದ್ದರು ಮತ್ತು ಯಾವುದೋ ಮಹತ್ವದ ದಾಖಲೆಯನ್ನು ಒದಗಿಸಲಿದ್ದರು. ಈ ಹಗರಣದಲ್ಲಿ ಭಾಗಿಯಾಗಿರುವವರು ನನ್ನ ಸೋದರನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಅವರನ್ನು ಬಿಡಬಾರದು” ಎಂದು ಕತುವಾ ಅವರ ಸೋದರ ರಾಜನ್ ಕತುವಾ ತಿಳಿಸಿದ್ದಾರೆ.
ದೇಶೀಯ ಬೊಫೋರ್ಸ್ ಬಂದೂಕುಗಳಲ್ಲಿ ಚೀನಾದ ಬಿಡಿಭಾಗಗಳನ್ನು ಪೂರೈಸಿರುವ ಮತ್ತ ಬಳಸಿರುವ ಆರೋಪಕ್ಕೆ ಸಂಬಂಧಿಸಿ ಸಿಬಿಐ ಕತುವಾರನ್ನು ಪ್ರಶ್ನಿಸಿದ ವಾರಗಳ ನಂತರ ಅವರು ನಾಪತ್ತೆಯಾಗಿದ್ದರು. ಕತುವಾರ ದ್ವಿಚಕ್ರ ವಾಹನವನ್ನು ಕಂಡು ಸಂಶಯಗೊಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ತೆರಳಿದ ಪೊಲೀಸರು ಕತುವಾರ ಕೊಳೆತ ಶವವನ್ನು ಕಾರ್ಖಾನೆಯೊಂದರ ಒಳಗೆ ಪತ್ತೆ ಮಾಡಿದ್ದರು. ಕತುವಾ ಕುಟುಂಬಸ್ಥರು ಇದೊಂದು ಹತ್ಯೆ ಎಂದು ಆರೋಪಿಸಿದ್ದರೆ ಆರಂಭದಲ್ಲಿ ಪೊಲೀಸರು ಕತುವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಾದಿಸಿದ್ದರು.







