ಮಂಧಾನಾ ಮಿಂಚು: ವನಿತೆಯರಿಗೂ ತಪ್ಪದ ಸೋಲು

ವೆಲ್ಲಿಂಗ್ಟನ್, ಫೆ.6: ಸತತ ಪಂದ್ಯಗಳಲ್ಲಿ ಮಿಂಚುತ್ತಿರುವ ಸ್ಮತಿ ಮಂಧಾನಾ ಭರ್ಜರಿ ಅರ್ಧಶತಕ ಬಾರಿಸಿದರೂ ಭಾರತ ಮಹಿಳಾ ತಂಡ ಬುಧವಾರ ಕಿವೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 23 ರನ್‌ಗಳಿಂದ ಮುಗ್ಗರಿಸಿದೆ. ಈ ಮೂಲಕ ನ್ಯೂಝಿಲೆಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕೇವಲ 24 ಎಸೆತಗಳಲ್ಲಿ 50 ರನ್ ಪೂರೈಸಿದ ಮಂಧಾನಾ ಅತ್ಯಂತ ವೇಗದ ಅರ್ಧಶತಕವನ್ನು ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ವುಮನ್‌ಎಂಬ ದಾಖಲೆ ಬರೆದರು. ಒಟ್ಟು 34 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿ, 3 ಸಿಕ್ಸರ್‌ಗಳ ಸಹಿತ 58 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಕಿವೀಸ್ ವೇಗಿ ಲೀ ತಾಹುಹು ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಅರ್ಹವಾಗಿಯೇ ಅವರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಲೆಗ್ ಸ್ಪಿನ್ನರ್ ಅಮೇಲಿಯ ಕೇರ್(28ಕ್ಕೆ 2) ಸ್ಮತಿ ಹಾಗೂ ನಾಯಕಿ ಹರ್ಮನ್‌ಪ್ರೀತ್‌ರ ವಿಕೆಟ್‌ಗಳನ್ನು ಕೆಡವಿ ಭಾರತದ ದೋಣಿಯನ್ನು ಮುಳುಗಿಸಿದರು. 160 ರನ್‌ಗಳ ಗುರಿ ಪಡೆದಿದ್ದ ಭಾರತ 19.1 ಓವರ್‌ಗಳಲ್ಲಿ 136 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ಮಂಧಾನಾ ಹಾಗೂ ಜೆಮಿಮಾ ರೋಡ್ರಿಗಸ್ (39)ಜೊತೆಯಾಟವಾಡುವುದರ ಮೂಲಕ ಒಂದು ಹಂತದಲ್ಲಿ ಭಾರತ 102 ರನ್‌ಗೆ 2 ವಿಕೆಟ್ ಕಳೆದುಕೊಂಡು ಉತ್ತಮ ಹಂತಕ್ಕೆ ಬಂದಿತ್ತು. ಆದರೆ ಇನ್ನುಳಿದ 8 ವಿಕೆಟ್‌ಗಳು 34 ರನ್‌ಗಳ ಅಂತರದಲ್ಲಿ ಪತನಗೊಂಡವು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲೆಂಡ್ ತಂಡ ಸೋಫಿ ಡಿವೈನ್(62) ಹಾಗೂ ನಾಯಕಿ ಆ್ಯಮಿ(33) ಕೊಡುಗೆಯಿಂದ ಕಿವೀಸ್ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗೆ 159 ರನ್‌ಗಳ ಉತ್ತಮ ಮೊತ್ತ ದಾಖಲಿಸಿತ್ತು. ಈ ಪಂದ್ಯಕ್ಕೆ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್‌ರನ್ನು ಕೈಬಿಡಲಾಗಿತ್ತು. ಮುಂದಿನ ಪಂದ್ಯ ಆಕ್ಲೆಂಡ್‌ನಲ್ಲಿ ಶುಕ್ರವಾರ ನಡೆಯಲಿದೆ.







