ಪ್ರಶಸ್ತಿಯ ಹಾದಿಯಲ್ಲಿ ವಿದರ್ಭ
ರಣಜಿ ಟ್ರೋಫಿ ಫೈನಲ್

►ಮುಂದುವರಿದ ಪೂಜಾರ ವೆಫಲ್ಯ
►ಜೈದೇವ್ ಪಡೆಗೆ 148 ರನ್ ಅಗತ್ಯ
►ಫಝಲ್ ಪಡೆಗೆ ಬೇಕು 5 ವಿಕೆಟ್
►ಇಂದು ಅಂತಿಮ ದಿನದ ಕುತೂಹಲ
ನಾಗ್ಪುರ, ಫೆ.6: ಚೊಚ್ಚಲ ರಣಜಿ ಟ್ರೋಫಿ ಜಯದ ನಿರೀಕ್ಷೆಯಲ್ಲಿರುವ ಸೌರಾಷ್ಟ್ರ ತಂಡಕ್ಕೆ ಕೇವಲ 206 ರನ್‌ಗಳ ಗೆಲುವಿನ ಗುರಿ ಬೆಟ್ಟದಂತೆ ಭಾಸವಾಗುತ್ತಿದೆ. ಫೈನಲ್ ಪಂದ್ಯದ ನಾಲ್ಕನೇ ದಿನದ ಮೂರನೇ ಅವಧಿಯ ಆಟದ 5 ಎಸೆತಗಳಲ್ಲಿ ಸೌರಾಷ್ಟ್ರಕ್ಕೆ ಈ ಗುರಿ ಇನ್ನಷ್ಟು ದೂರವಾದದ್ದಂತೂ ಸ್ಪಷ್ಟ.
ಇಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನ 5 ರನ್ ಮುನ್ನಡೆ ಸೇರಿದಂತೆ ಗೆಲುವಿಗೆ ಒಟ್ಟು 206 ರನ್‌ಗಳ ಗುರಿ ಪಡೆದಿರುವ ಪ್ರವಾಸಿ ತಂಡ ನಾಲ್ಕನೇ ದಿನದಾಟದಲ್ಲಿ 58 ರನ್‌ಗೆ 5 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ಪರ ಪ್ರಥಮ ಇನಿಂಗ್ಸ್ ಶತಕವೀರ ಸ್ನೆಲ್ ಪಟೇಲ್(12) ಮೊದಲ ವಿಕೆಟ್ ರೂಪದಲ್ಲಿ ನಿರ್ಗಮಿಸಿದರು. ಸರ್ವಾಟೆ ಎಸೆತದಲ್ಲಿ ಜಾಫರ್‌ಗೆ ಅವರು ಕ್ಯಾಚ್ ನೀಡಿದರು. ಸರ್ವಾಟೆ ಅವರ ಮರು ಓವರ್‌ನಲ್ಲೇ ಹರ್ವಿಕ್ ದೇಸಾಯಿ(8) ಅವರಿಗೇ ಮರು ಕ್ಯಾಚ್ ನೀಡಿದರು. ಈ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ಚೇತೇಶ್ವರ ಪೂಜಾರ (0)ಸರ್ವಾಟೆಯ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಪೂಜಾರ ವಿಕೆಟ್ ಪತನದ ನಂತರ ಬಂದ ಅರ್ಪಿತ್ ವಸವದಾ(5) ಅವರ ವಿಕೆಟನ್ನು ಉಮೇಶ್ ಯಾದವ್ ಕೆಡವಿದರು. ಈ ವೇಳೆ ಸೌರಾಷ್ಟ್ರ 4 ವಿಕೆಟ್ ಕಳೆದುಕೊಂಡು ಕೇವಲ 35 ರನ್ ಗಳಿಸಿತ್ತು. ಸೌರಾಷ್ಟ್ರದ ಮತ್ತೊಬ್ಬ ಪರಿಣಿತ ದಾಂಡಿಗ ಶೆಲ್ಡನ್ ಜಾಕ್ಸನ್(7) ಅಕ್ಷಯ್ ವಾಖರೆ ಎಸೆತದಲ್ಲಿ ಬೌಲ್ಡ್ ಆದರು. ನಂ.3 ಆಟಗಾರ ವಿಶ್ವರಾಜ್ ಜಡೇಜ(23) ಹಾಗೂ ಕಮಲೇಶ್ ಮಕ್ವಾನಾ(2) ಕ್ರೀಸ್ ಕಾಯ್ದುಕೊಂಡು ಸೌರಾಷ್ಟ್ರದ ಕೊನೆಯ ಭರವಸೆಯಾಗಿದ್ದಾರೆ.
ಇದಕ್ಕೂ ಮೊದಲು ತನ್ನ ಎರಡನೇ ಇನಿಂಗ್ಸ್‌ನ್ನು 2 ವಿಕೆಟ್‌ಗೆ 55 ರನ್‌ಗಳಿಂದ ಮುಂದುವರಿಸಿದ ವಿದರ್ಭ ತಂಡದ ವಸೀಂ ಜಾಫರ್(11) ಹಾಗೂ ಗಣೇಶ್ ಸತೀಶ್(35) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ವಿದರ್ಭ 77ಕ್ಕೆ 4 ವಿಕೆಟ್ ಕಳೆದುಕೊಂಡಿತು. ಅಕ್ಷಯ್ ವಾಡ್ಕರ್ ಸೊನ್ನೆ ಸುತ್ತಿದರು. ಮೋಹಿತ್ ಕಾಳೆ (38) ಹಾಗೂ ಸರ್ವಾಟೆ(49) ದಿಢೀರ್ ಕುಸಿತದ ಹಂತದಲ್ಲಿದ್ದ ತಂಡವನ್ನು ಮೇಲೆತ್ತಿದರು. ಅಂತಿಮವಾಗಿ ವಿದರ್ಭ ಬರೋಬ್ಬರಿ 200 ರನ್‌ಗೆ ಸರ್ವಪತನ ಕಂಡಿತು. ಸೌರಾಷ್ಟ್ರ ಪರ ಧರ್ಮೇಂದ್ರಸಿಂಹ ಜಡೇಜ 6 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಚೇತೇಶ್ವರ
ಸೌರಾಷ್ಟ್ರ ತಂಡದ ಅನುಭವಿ ದಾಂಡಿಗ, ರಾಷ್ಟ್ರೀಯ ತಂಡ ಪ್ರತಿನಿಧಿಸುವ ಚೇತೇಶ್ವರ ಪೂಜಾರ ಮತ್ತೊಮ್ಮೆ ಭಾರೀ ವೈಫಲ್ಯ ಅನುಭವಿಸಿದರು. ತನ್ನ ತಂಡ ಎರಡನೇ ಇನಿಂಗ್ಸ್‌ನಲ್ಲಿ 22 ರನ್‌ಗೆ 2 ವಿಕೆಟ್ ಕಳೆದುಕೊಂಡಿದ್ದ ಹಂತದಲ್ಲಿ ಕ್ರೀಸ್‌ಗೆ ಆಗಮಿಸಿದ ಅವರು ವಿದರ್ಭದ ಲೆಗ್‌ಸ್ಪಿನ್ನರ್ ಆದಿತ್ಯ ಸರ್ವಾಟೆಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.







