ಉದ್ಯೋಗ ಭರವಸೆ ಈಡೇರಿಸಲು ಹರ್ಯಾಣ ಸಿಎಂಗೆ ಪ್ಯಾರಾ ಅಥ್ಲೀಟ್‌ಗಳ ಮನವಿ

ಚಂಡಿಗಢ, ಫೆ.6: ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್ ನೇತೃತ್ವದಲ್ಲಿ ಹಲವು ಪ್ಯಾರಾ ಅಥ್ಲೀಟ್‌ಗಳು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಖಟ್ಟರ್‌ರನ್ನು ಭೇಟಿಯಾಗಿ ರಾಜ್ಯ ಸರಕಾರ ತಮಗೆ ನೀಡಿರುವ ಉದ್ಯೋಗದ ಭರವಸೆಯನ್ನು ಈಡೇರಿಸುವಂತೆ ಕೇಳಿಕೊಂಡಿದ್ದಾರೆ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ ಮಲಿಕ್ ಬೆಳ್ಳಿ ಪದಕ ಜಯಿಸಿದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಅಥ್ಲೀಟ್ ಎಂಬ ಕೀರ್ತಿಗೆ ಭಾಜನರಾಗಿದ್ದರು.
ಮಲಿಕ್, ಏಶ್ಯನ್ ಪ್ಯಾರಾಗೇಮ್ಸ್‌ನಲ್ಲಿ ಚಿನ್ನ ಪದಕ ವಿಜೇತ ಡಿಸ್ಕಸ್ ಎಸೆತಗಾರ ಅಮಿತ್ ಸರೊಹಾ ಅವರನ್ನೊಳಗೊಂಡ ಅಥ್ಲೀಟ್‌ಗಳ ಬಳಗ ಮಂಗಳವಾರ ಹರ್ಯಾಣ ಮುಖ್ಯಮಂತ್ರಿಯನ್ನು ಭೇಟಿಯಾಯಿತು.
ಒಲಿಂಪಿಕ್ ಗೇಮ್ಸ್‌ನಲ್ಲಿ ಪದಕ ಜಯಿಸಿರುವ 48ರ ಹರೆಯದ ಮಲಿಕ್‌ಗೆ ಹರ್ಯಾಣ ಸರಕಾರ 4 ಕೋ.ರೂ. ಬಹುಮಾನ ನೀಡಿತ್ತು. ಆಗ ನೀಡಿದ್ದ ಉದ್ಯೋಗದ ಭರವಸೆಯನ್ನೂ ಸರಕಾರ ಈಡೇರಿಸುವ ವಿಶ್ವಾಸವನ್ನು ಮಲಿಕ್ ವ್ಯಕ್ತಪಡಿಸಿದ್ದಾರೆ. ‘‘ನನ್ನ ಕಡತ ಸ್ವೀಕೃತಗೊಂಡಿದೆ. ಶೀಘ್ರದಲ್ಲೇ ಉದ್ಯೋಗದ ಪತ್ರ ಲಭಿಸುವ ಸಂಪೂರ್ಣ ಭರವಸೆ ನನಗಿದೆ. ನಾನು ಹಾಗೂ ಇತರ ಪ್ಯಾರಾ-ಅಥ್ಲೀಟ್‌ಗಳು ಮುಖ್ಯಮಂತ್ರಿಯನ್ನು ಭೇಟಿಯಾದಾಗ ಸಕಾರಾತ್ಮಕ ಭರವಸೆ ನೀಡಿದ್ದಾರೆ’’ ಎಂದು ಮಲಿಕ್ ಪಿಟಿಐಗೆ ತಿಳಿಸಿದ್ದಾರೆ. ಹರ್ಯಾಣ ಸರಕಾರ ಕಳೆದ ವರ್ಷದ ಆಗಸ್ಟ್‌ನಲ್ಲಿ ದಾಖಲೆಯನ್ನು ಸಲ್ಲಿಸಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಂತೆ ಮಲಿಕ್‌ಗೆ ಸೂಚಿಸಿತ್ತು. ಪ್ರಸ್ತುತ ಅವರು ಗುರ್ಗಾಂವ್‌ನಲ್ಲಿರುವ ರಾಜ್ಯ ಕ್ರೀಡಾ ಇಲಾಖೆಯಲ್ಲಿ ಜೂನಿಯರ್ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.







