ಜೊತೆಯಾಗಿ ಅಂತರ್ ರಾಷ್ಟ್ರೀಯ ಪಂದ್ಯ ಆಡಿದ ಪಾಂಡ್ಯ ಸಹೋದರರು
ಹೊಸದಿಲ್ಲಿ, ಫೆ.6: ಮುಂಬೈ ಇಂಡಿಯನ್ಸ್ ಪರವಾಗಿ ಹಲವು ಐಪಿಎಲ್ ಪಂದ್ಯಗಳನ್ನು ಒಟ್ಟಿಗೆ ಆಡಿದ್ದ ಪಾಂಡ್ಯ ಸಹೋದರರಾದ ಹಾರ್ದಿಕ್ ಹಾಗೂ ಕೃನಾಲ್ ಬುಧವಾರ ವೆಲ್ಲಿಂಗ್ಟನ್‌ನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಇದೇ ಮೊದಲ ಬಾರಿ ಜೊತೆಯಾಗಿ ಅಂತರ್‌ರಾಷ್ಟ್ರೀಯ ಪಂದ್ಯ ಆಡಿದ್ದಾರೆ.
ಭಾರತ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ಹಿನ್ನೆಲೆಯಲ್ಲಿ ಸಹೋದರರಿಗೆ ಈ ಪಂದ್ಯ ಸ್ಮರಣೀಯವಾಗಿ ಉಳಿದಿಲ್ಲ. ಹಿರಿಯ ಸಹೋದರ ಕೃನಾಲ್ 2018ರ ನವೆಂಬರ್‌ನಲ್ಲಿ ಟಿ-20ಗೆ ಕಾಲಿಟ್ಟಿದ್ದರು. ಈ ತನಕ 6 ಪಂದ್ಯಗಳನ್ನು ಆಡಿದ್ದಾರೆ. ಹಾರ್ದಿಕ್ ಪಾಂಡ್ಯ 2016ರಲ್ಲಿ ಭಾರತದ ಆಸ್ಟ್ರೇಲಿಯ ಪ್ರವಾಸದ ವೇಳೆ ಚೊಚ್ಚಲ ಟಿ-20 ಪಂದ್ಯ ಆಡಿದ್ದರು. ಕೃನಾಲ್ ನ್ಯೂಝಿಲೆಂಡ್ ಆರಂಭಿಕ ಕಾಲಿನ್ ಮುನ್ರೊ ವಿಕೆಟ್ ಪಡೆದರೆ, ಹಾರ್ದಿಕ್ ಅವರು ಡ್ಯಾರಿಲ್ ಮಿಚೆಲ್(8) ಹಾಗೂ ಕಾಲಿನ್ ಗ್ರಾಂಡ್‌ಹೊಮ್ಮೆ(3) ವಿಕೆಟ್ ಪಡೆದಿದ್ದರು. ಬ್ಯಾಟಿಂಗ್‌ನಲ್ಲಿ ಹಾರ್ದಿಕ್ ಕೇವಲ 4 ರನ್ ಗಳಿಸಿದ್ದರು. ಅಣ್ಣ-ತಮ್ಮ 6ನೇ ವಿಕೆಟ್‌ಗೆ 52 ರನ್ ಜೊತೆಯಾಟ ನಡೆಸಿದರೂ 220 ರನ್ ಗುರಿ ಪಡೆದ ಭಾರತ 139 ರನ್‌ಗೆ ಆಲೌಟಾಗಿತ್ತು. ಕೃನಾಲ್ ಹಾಗೂ ಹಾರ್ದಿಕ್ ಅವರು ಮಣಿಂದರ್ ಹಾಗೂ ಸುರಿಂದರ್ ಅಮರನಾಥ್ ಹಾಗೂ ಇರ್ಫಾನ್ ಹಾಗೂ ಯೂಸುಫ್ ಪಠಾಣ್ ಬಳಿಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಮೂರನೇ ಸಹೋದರ ಜೋಡಿಯಾಗಿದ್ದಾರೆ.





