ನೊಬೆಲ್ ಶಾಂತಿ ಪ್ರಶಸ್ತಿಗೆ ಕೇರಳ ಮೀನುಗಾರರ ಹೆಸರು ಶಿಫಾರಸು!
ತಿರುವನಂತಪುರ, ಫೆ.7: ಕೇರಳ ಪ್ರವಾಹ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಾವಿರಾರು ಮಂದಿಯ ಪ್ರಾಣ ರಕ್ಷಿಸಿದ ಕೇರಳ ಮೀನುಗಾರರಿಗೆ ಸಂಯುಕ್ತವಾಗಿ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ನಾರ್ವೆಯನ್ ನೊಬೆಲ್ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
"ಪ್ರವಾಹ ಪರಿಸ್ಥಿತಿ ಉಲ್ಬಣವಾದ ಸಂದರ್ಭದಲ್ಲಿ, ತಮ್ಮ ಜೀವ ಪಣಕ್ಕಿಟ್ಟು, ತಮ್ಮ ಜೀವನಾಧಾರ ಎನಿಸಿದ ಮೀನುಗಾರಿಕಾ ದೋಣಿಗಳಿಗೆ ಆಗಬಹುದಾದ ಹಾನಿಯನ್ನೂ ಲೆಕ್ಕಿಸದೇ ಮೀನುಗಾರರು ಕಣಕ್ಕೆ ಧುಮುಕಿ ಸಾವಿರಾರು ಮಂದಿ ಸಹ ಪ್ರಜೆಗಳ ರಕ್ಷಣೆ ಮಾಡಿದ್ದಾರೆ" ಎಂದು ತರೂರ್ ಪತ್ರದಲ್ಲಿ ವಿವರಿಸಿದ್ದಾರೆ.
"ಒಳನಾಡಿಗೆ ಕೂಡಾ ತಮ್ಮ ದೋಣಿಗಳನ್ನು ಒಯ್ದ ಮೀನುಗಾರರ ಸ್ಥಳೀಯ ಪರಿಸ್ಥಿತಿಯ ಅನುಭವ ಪರಿಹಾರ ಕಾರ್ಯಾಚರಣೆಗೆ ದೊಡ್ಡ ಶಕ್ತಿಯಾಯಿತು. ಅಪಾಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಕ್ಕಪಕ್ಕದ ನಿವಾಸಿಗಳನ್ನು ರಕ್ಷಿಸಿರುವುದು ಮಾತ್ರವಲ್ಲದೇ, ಒಂದೇ ಸಮನೆ ಪ್ರವಾಹ ಪರಿಸ್ಥಿತಿ ಏರುತ್ತಿದ್ದರೂ, ಇತರ ಪರಿಹಾರ ನಾವೆಗಳಿಗೆ ಮಾರ್ಗದರ್ಶನವನ್ನೂ ಇವರು ನೀಡಿದ್ದರು" ಎಂದು ಬಣ್ಣಿಸಿದ್ದಾರೆ.
"ದೇಶಾದ್ಯಂತ ಮೀನುಗಾರರು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ಮತ್ತು ಸೌಲಭ್ಯ ವಂಚಿತ ವರ್ಗ. ಕೇರಳ ಮೀನುಗಾರರೂ ಇದಕ್ಕೆ ಹೊರತಲ್ಲ. ಇಂಥ ಸ್ಥಿತಿಗತಿಯ ಹಿನ್ನೆಲೆಯಲ್ಲೂ, ಪ್ರವಾಹ ಪರಿಸ್ಥಿತಿಯಲ್ಲಿ ಅಸಾಮಾನ್ಯ ಹಾಗೂ ಪರಹಿತಚಿಂತನೆಯ ಮನೋಭಾವ ಈ ಕರಾವಳಿ ಯೋಧರ ಜೀವರಕ್ಷಣೆ ಸೇವೆಯ ಚಾಲನಾ ಶಕ್ತಿಯಾಗಿತ್ತು ಎಂದು ಹೇಳಿದ್ದಾರೆ.