ಭಾರತದಲ್ಲಿ ಈ ವರ್ಷ ಗೂಗಲ್ ಸರ್ಚ್‌ನಲ್ಲಿ ಗರಿಷ್ಠ ಹುಡುಕಾಟ ಏನು ಗೊತ್ತೇ?

ಹೊಸದಿಲ್ಲಿ, ಫೆ.7: ಸುದೀರ್ಘ ಹಾಗೂ ತೀವ್ರ ಚಳಿಗಾಲದ ಕಾರಣದಿಂದ ಭಾರತದಲ್ಲಿ ಈ ಬಾರಿ ಹಂದಿಜ್ವರ (ಎಚ್1ಎನ್1) ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ಇದರಿಂದ ಆತಂಕಿತರಾದ ಉತ್ತರ ರಾಜ್ಯಗಳ ಮಂದಿ ಗೂಗಲ್ ಸರ್ಚ್‌ನಲ್ಲಿ ಎಚ್1ಎನ್1 ಬಗ್ಗೆ ಗರಿಷ್ಠ ಹುಡುಕಾಟ ನಡೆಸಿರುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬಂದಿದೆ.
ಫೆಬ್ರವರಿ 3ರವರೆಗೆ ದೇಶದಲ್ಲಿ ಒಟ್ಟು 6,601 ಎಚ್1ಎನ್1 ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ಎಂಟು ವರ್ಷಗಳಲ್ಲಿ ನಾಲ್ಕನೇ ಗರಿಷ್ಠ ಸಂಖ್ಯೆಯಾಗಿದೆ. 2015ರಲ್ಲಿ ಗರಿಷ್ಠ ಎಂದರೆ 42,592 ಪ್ರಕರಣಗಳು ವರದಿಯಾಗಿದ್ದವು. ಆದರೆ ಈ ಬಾರಿ ಒಂದು ತಿಂಗಳಲ್ಲೇ 6601 ಪ್ರಕರಣಗಳ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಭಾರತಕ್ಕೆ ಸಂಬಂಧಿಸಿದ ಗೂಗಲ್ ಸರ್ಚ್ ಟ್ರೆಂಡ್ ದತ್ತಾಂಶವನ್ನು ವಿಶ್ಲೇಷಿಸಿದಾಗ, ವ್ಯಾಪಕವಾಗುತ್ತಿರುವ ಈ ಸಾಂಕ್ರಾಮಿಕ ರೋಗದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿರುವುದು ಕಂಡುಬಂದಿದೆ. ಉತ್ತರ ಭಾರತ ಹಾಗೂ ವಾಯವ್ಯ ರಾಜ್ಯಗಳ ಜನರಲ್ಲಿ ಈ ಬಗ್ಗೆ ಹೆಚ್ಚಿನ ಕುತೂಹಲ ಇರುವುದು ಕೂಡಾ ದೃಢಪಟ್ಟಿದೆ.
ಸ್ವೈನ್ ಫ್ಲೂ, ಸ್ವೈನ್ ಫ್ಲೂ ಸಿಂಪ್ಟಮ್ಸ್ ಮತ್ತು ಸ್ವೈನ್‌ಫ್ಲೂ ವ್ಯಾಕ್ಸಿನ್ ಎಂಬ ಪದಪುಂಜಗಳನ್ನು ಜನ ಗರಿಷ್ಠವಾಗಿ ಗೂಗಲ್ ಸರ್ಚ್‌ನಲ್ಲಿ ಹುಡುಕಿದ್ದಾರೆ. 2016ರ ಬಳಿಕ ಜನವರಿ- ಫೆಬ್ರವರಿಯಲ್ಲಿ ಗರಿಷ್ಠ ಮಂದಿ ಹಂದಿಜ್ವರ ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸರ್ಚ್ ಮೊರೆ ಹೋಗಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎಚ್1ಎನ್1ನಿಂದ ಎಐಐಎಂಎಸ್‌ನಲ್ಲಿ ದಾಖಲಾಗಿದ್ದ ದಿನ ಅಂದರೆ ಜನವರಿ 17ರಂದು ಅತಿಹೆಚ್ಚು ಸಂಖ್ಯೆಯ ನೆಟ್ ಬಳಕೆದಾರರು ಈ ವಿಷಯವನ್ನು ಹುಡುಕಿದ್ದಾರೆ.







