ವಖಾರ್ ಅಲಿಯ ಹೊಸ ಇಲೆಕ್ಟ್ರಿಕ್ ಬೈಕ್ 'ಮೋದಿ' ನೋಡಿದ್ದೀರಾ ?
ತಾನು ರೂಪಿಸಿದ ಬೈಕ್ ಗೆ ಪ್ರಧಾನಿ ಹೆಸರಿಟ್ಟ ಯುವ ಇಂಜಿನಿಯರ್
ಮೀರತ್, ಫೆ.7: ಮೀರತ್ ನಗರದ ಇಂಜಿನಿಯರಿಂಗ್ ವಿದ್ಯಾರ್ಥಿ ವಖಾರ್ ಅಲಿ ವಿನೂತನ ವಿನ್ಯಾಸದ ಇಲೆಕ್ಟ್ರಿಕ್ ಬೈಕ್ ತಯಾರಿಸಿದ್ದಾರೆ. ತಾವು ರೂಪಿಸಿದ ಈ ಬೈಕ್ ಗೆ ಅವರು ಪ್ರಧಾನಿ ನರೇಂದ್ರ ಮೋದಿಯ ಹೆಸರನ್ನು ನೀಡಿದ್ದಾರೆ. ಸಿಂಗಲ್ ಚಾರ್ಜ್ ಮಾಡಿದಾಗ ಗಂಟೆಗೆ 100 ಕಿ.ಮೀ. ಮೈಲೇಜ್ ನೀಡುವ ಈ ಬೈಕ್ ಹಸಿರು ಇಂಧನದಲ್ಲಿ ಚಲಿಸುವಾಗ ಗಂಟೆಗೆ ಗರಿಷ್ಠ 150 ಕಿ.ಮೀ. ಮೈಲೇಜ್ ನೀಡಲಿದೆ ಹೇಳಲಾಗಿದೆ.
ವಖಾರ್ ಅಲಿ ಅಷ್ಟೊಂದು ಉತ್ತಮ ಆರ್ಥಿಕ ಹಿನ್ನೆಲೆಯಿಂದ ಬಂದಿಲ್ಲದೇ ಇದ್ದರೂ ಒಟ್ಟು ರೂ.72,000 ವೆಚ್ಚದಲ್ಲಿ ಈ ಬೈಕ್ ನಿರ್ಮಿಸಿದ್ದಾರೆ. ಆಟೊಮೋಟಿವ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ವಖಾರ್ ಅಲಿ ದಿಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯಲ್ಲಿ ತನ್ನ ತರಗತಿಯಲ್ಲಿ ಟಾಪರ್ ಆಗಿದ್ದಾರೆ.
ಅವರ ಈ ಬೈಕ್ ನಲ್ಲಿ ರಿಜನರೇಟರ್ ಮೋಟಾರ್ ಇದ್ದು ಲ್ಯಾಪ್ ಟಾಪ್ ಚಾರ್ಜರ್ ಕೂಡ ಬಳಸಿ ಅದನ್ನು ಚಾರ್ಜ್ ಮಾಡಬಹುದಾಗಿದೆ. ಈ ಬೈಕ್ ಗೆ ದೊಡ್ಡ ಮಟ್ಟದ ಸದ್ದು ಕೂಡ ಇಲ್ಲ.
ಈ ಬೈಕ್ ತಯಾರಿಸಲು ವಖಾರ್ ವಿವಿಧ ಬೈಕ್ ಮತ್ತು ಕಾರುಗಳ ಬಿಡಿ ಭಾಗಗಳನ್ನು ಉಪಯೋಗಿಸಿದ್ದಾರೆ. ಬೈಕ್ ನ ಚಕ್ರಗಳು ಮತ್ತು ಕೆಲವೊಂದು ಭಾಗಗಳನ್ನು ಕೆಟಿಎಂ ಆರ್‌ಸಿ ಬೈಕ್ ನಿಂದ ಪಡೆದಿದ್ದರೆ, ಇಂಧನ ಟ್ಯಾಂಕ್ ಗೆ ಪಲ್ಸರ್ ಎನ್‌ಎಸ್ 200 ಬೈಕ್ ನ ಬಿಡಿ ಭಾಗ ಉಪಯೋಗಿಸಲಾಗಿದೆ. ಸುಮಾರು ಎರಡು ತಿಂಗಳು ಶ್ರಮ ಪಟ್ಟು ಅವರು ಈ ಇಲೆಕ್ಟ್ರಿಕ್ ಬೈಕ್ ನಿರ್ಮಿಸಿದ್ದಾರೆ. ಕೆಲವೊಮ್ಮೆ ರಾತ್ರಿ ನಿದ್ದೆಗೆಟ್ಟು ವಖಾರ್ ಅಲಿ ಈ ಬೈಕ್ ತಯಾರಿಯಲ್ಲೇ ತೊಡಗಿದ್ದ ಎಂದು ಅವರ ತಾಯಿ ಹೇಳುತ್ತಾರೆ.
ಪ್ರಧಾನಿ ಮೋದಿಯಿಂದ ತಾವು ಸ್ಫೂರ್ತಿ ಪಡೆದಿದ್ದಾಗಿ ಹೇಳುವ ವಖಾರ್ ತಮ್ಮ ಬೈಕ್ ಗೆ MODI ಅಂದರೆ (ಮೋಡ್ ಆಫ್ ಡೆವಲಪಿಂಗ್ ಇಂಡಿಯಾ) ಹೆಸರಿಟ್ಟಿದ್ದಾರೆ.