ವಂದೇ ಮಾತರಂ ಹಾಡಲು ನಿರಾಕರಿಸಿದ ಶಿಕ್ಷಕನಿಗೆ ಥಳಿತ: ವೀಡಿಯೊ ವೈರಲ್
ಹೊಸದಿಲ್ಲಿ, ಫೆ.7: ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣದ ನಂತರ ವಂದೇ ಮಾತರಂ ಹಾಡಲು ನಿರಾಕರಿಸಿದ ಮುಸ್ಲಿಂ ಶಿಕ್ಷಕನೊಬ್ಬನಿಗೆ ಸ್ಥಳೀಯರು ಥಳಿಸುತ್ತಿರುವ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು ಘಟನೆಯ ವೀಡಿಯೋ ವೈರಲ್ ಆಗಿದೆ.
ಸಂತ್ರಸ್ತನನ್ನು ಅಫ್ಝಲ್ ಹುಸೈನ್ ಎಂದು ಗುರುತಿಸಲಾಗಿದೆ. ಅದು ತನ್ನ ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿರುವುದು ತಾನು ಹಾಡಿಲ್ಲ ಎಂದು ಹುಸೈನ್ ಹೇಳಿದ್ದಾನೆನ್ನಲಾಗಿದೆ.
‘‘ವಂದೇ ಮಾತರಂ ನಮ್ಮ ನಂಬಿಕೆಗೆ ವಿರುದ್ಧವಾಗಿದೆ. ವಂದೇ ಮಾತರಂ ಹಾಡಲೇಬೇಕು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಲಾಗಿಲ್ಲ. ಘಟನೆಯಲ್ಲಿ ನನ್ನ ಪ್ರಾಣವೇ ಹೋಗುವ ಸಾಧ್ಯತೆಯಿತ್ತು’’ ಎಂದು ಆ ಶಿಕ್ಷಕ ಹೇಳಿದ್ದಾನೆಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
‘‘ಇಂತಹ ಒಂದು ಘಟನೆ ನಡೆದಿದ್ದು ನಿಜವೆಂದಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರ ಗೀತೆಯ ಅವಮಾನವನ್ನು ಕ್ಷಮಿಸಲು ಸಾಧ್ಯವಿಲ್ಲ’’ ಎಂದು ಬಿಹಾರದ ಶಿಕ್ಷಣ ಸಚಿವ ಕೆ.ಎನ್.ಪ್ರಸಾದ್ ಶರ್ಮ ತಿಳಿಸಿದ್ದಾರೆ.
ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ಚಂದ್ರ ದೇವ್ ಮಾತನಾಡುತ್ತಾ, ಇಲ್ಲಿಯ ತನಕ ಈ ಘಟನೆ ಕುರಿತಂತೆ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.