ಪುತ್ತೂರು: ‘ಕೆನರಾ ವಿದ್ಯಾ ಜ್ಯೋತಿ' ವಿದ್ಯಾರ್ಥಿ ವೇತನ ವಿತರಣೆ

ಪುತ್ತೂರು, ಫೆ.7: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕ್‌ಗಳು ಸುಲಭ ರೀತಿಯಲ್ಲಿ ಸಾಲಗಳನ್ನು ನೀಡುತ್ತಿದ್ದು ಇದರ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಪುತ್ತೂರು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ, ಜಿಲ್ಲಾ ಪಂಚಾಯತ್ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಸುಂದರ ನಾಯ್ಕ ಬಪ್ಪಳಿಗೆ ಹೇಳಿದ್ದಾರೆ.
ಅವರು ಕೆನರಾ ಬ್ಯಾಂಕ್ ಪುತ್ತೂರು ಪ್ರಧಾನ ಕಚೇರಿಯಲ್ಲಿ ಕೆನರಾ ಬ್ಯಾಂಕಿನ ಸಿ.ಎಸ್.ಆರ್. ಯೋಜನೆಯಲ್ಲಿ ಪರಿಶಿಷ್ಟ ಜಾತಿ ಮತು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ವೇತನ ವಿತರಿಸಿದ ದಲಿತ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಬ್ಯಾಂಕಿನ ಕೆಲಸ ಶ್ಲಾಘನೀಯ ಎಂದರು.
ಬ್ಯಾಂಕಿನ ಪುತ್ತೂರು ಪ್ರಧಾನ ಶಾಖೆಯ ಮುಖ್ಯ ಪ್ರಬಂಧಕ ಕೆ.ಎಚ್.ಕಲ್ಕೂರ್ ಮಾತನಾಡಿ, ಬ್ಯಾಂಕ್‌ನ ವತಿಯಿಂದ ಸರಕಾರಿ ಪ್ರಾಥಮಿಕ ಶಾಲೆಯ 5, 6 ಮತ್ತು 7ನೇ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ರೂ.2,500 ಹಾಗೂ ಪ್ರೌಢಶಾಲೆಯ 8, 9 ಮತ್ತು 10ನೇ ತರಗತಿಯಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರೂ.5,000 ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಓದಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ವಿದ್ಯಾರ್ಥಿ ವೇತನವನ್ನು ವಿತರಿಸಲು ಬ್ಯಾಂಕ್ ಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.
ಸಮಾರಂಭದಲ್ಲಿ ದ.ಕ. ಜಿಲ್ಲಾ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಯು.ಕೆ.ನಾಯ್ಕ, ಬ್ಯಾಂಕಿನ ನಿವೃತ್ತ ಪ್ರಬಂಧಕರಾದ ಶೇಣಿ ರಾಮ ನಾಯ್ಕ್, ಶಿವಪ್ಪ ನಾಯ್ಕ್, ಜಾನು ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ಬ್ಯಾಂಕಿನ ಸಿಬ್ಬಂದಿ ಮೋಹನ ಸ್ವಾಗತಿಸಿದರು. ಅಧಿಕಾರಿ ಅಕ್ಷತಾ ವಂದಿಸಿದರು. ಪ್ರಬಂಧಕ ಪ್ರಭಾಕರ ಜಿ. ಕಾರ್ಯಕ್ರಮ ನಿರ್ವಹಿಸಿದರು.







