ತನಗೆ ಜನ್ಮ ನೀಡಿದ್ದಕ್ಕೆ ಹೆತ್ತವರ ವಿರುದ್ಧವೇ ಕಾನೂನು ಹೋರಾಟಕ್ಕೆ ಮುಂದಾದ ಪುತ್ರ
ಮುಂಬೈ, ಫೆ.7: ಮುಂಬೈ ನಗರದ ಯುವಕ, 27 ವರ್ಷ ವಯಸ್ಸಿನ ರಾಫೇಲ್ ಸ್ಯಾಮುವೆಲ್ ಎಂಬಾತ ತನ್ನ ಹೆತ್ತವರ ವಿರುದ್ಧವೇ ಕಾನೂನಿನ ಮೊರೆ ಹೋಗುವುದಾಗಿ ಹೇಳಿಕೊಂಡಿದ್ದಾನೆ. ಕಾರಣವಂತೂ ವಿಚಿತ್ರ. ತನ್ನ ಅನುಮತಿಯಿಲ್ಲದೆಯೇ ತನಗೆ ಜನ್ಮ ನೀಡಿದ್ದಕ್ಕಾಗಿ ಆತ ಇಂತಹ ಕ್ರಮ ಕೈಗೊಳ್ಳಲು ಬಯಸಿದ್ದಾನೆ.
ತನ್ನ ಫೇಸ್ ಬುಕ್ ಪುಟದಲ್ಲಿ ರಾಫೇಲ್ ಸ್ಯಾಮುವೆಲ್ ತಮ್ಮನ್ನು ‘ಆ್ಯಂಟಿ-ನಟಾಲಿಸ್ಟ್’ ಎಂದು ಬಣ್ಣಿಸಿದ್ದಾನಲ್ಲದೆ ಯುಟ್ಯೂಬ್ ವೀಡಿಯೋ ಪೋಸ್ಟ್ ಮಾಡಿ ಹೆತ್ತವರ ವಿರುದ್ಧ ಕಾನೂನಿನ ಮೊರೆ ಹೋಗಲು ಇರುವ ಕಾರಣವನ್ನು ಅದರಲ್ಲಿ ವಿವರಿಸಿದ್ದಾನೆ.
‘ಆ್ಯಂಟಿ-ನಟಾಲಿಸ್ಟ್’ಗಳ ಪ್ರಕಾರ ಜನರು ಸಂತಾನೋತ್ಪತ್ತಿ ನಡೆಸುವುದು ನೈತಿಕವಾಗಿ ತಪ್ಪು. ಸ್ಯಾಮುವೆಲ್ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ ಚಿತ್ರವೊಂದರಲ್ಲಿ “ಸಂತಾನೋತ್ಪತ್ತಿ ಎಲ್ಲಾ ಕೆಟ್ಟದ್ದಕ್ಕೂ ಕಾರಣವಾಗಿದೆ. ಮಕ್ಕಳನ್ನು ಪಡೆಯುವುದನ್ನು ನಿಲ್ಲಿಸಿ” ಎಂದು ಬರೆದಿದ್ದಾರೆ.
`ನಿಹಿಲ್ ಆನಂದ್'' ಎಂಬ ಯು ಟ್ಯೂಬ್ ಚಾನೆಲ್ ನಲ್ಲಿ ಆತ ಈ ವಿಡಿಯೊ ಪೋಸ್ಟ್ ಮಾಡಿದ್ದಾನೆ. “ಎಲ್ಲರೂ ತಮ್ಮ ಒಪ್ಪಿಗೆಯಿಲ್ಲದೇ ಹುಟ್ಟಿದವರು ಎಂದು ಭಾರತ ಮತ್ತು ಜಗತ್ತಿನ ಎಲ್ಲರೂ ತಿಳಿಯಬೇಕೆಂದು ನನ್ನ ಇಚ್ಛೆ. ಎಲ್ಲರೂ ತಮ್ಮ ಹೆತ್ತವರ ವಿಚಾರದಲ್ಲಿ ಯಾವುದೇ ಋಣ ಹೊಂದಿಲ್ಲವೆಂದೂ ತಿಳಿಯಬೇಕು” ಎಂದು ವೀಡಿಯೋದಲ್ಲಿ ಅವರು ಹೇಳಿದ್ದಾನೆ.