‘ಮೋದಿ ಮುರ್ದಾಬಾದ್’ ಹೇಳಬೇಡಿ: ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್ ಸಲಹೆ
ಹೊಸದಿಲ್ಲಿ, ಫೆ.7: ಕೆಲ ತಿಂಗಳುಗಳುಗಳ ಹಿಂದೆ ಸಂಸತ್ತಿನಲ್ಲಿ ಎಲ್ಲರೂ ನೋಡನೋಡುತ್ತಿದ್ದಂತೆಯೇ ಪ್ರಧಾನಿಯತ್ತ ತೆರಳಿ ಅವರನ್ನು ಆಲಂಗಿಸಿ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ತಮ್ಮ ಪಕ್ಷ ಕಾರ್ಯಕರ್ತರಿಗೆ ಒಂದು ಸಲಹೆ ನೀಡಿದ್ದಾರೆ. ತಮ್ಮ ರಾಜಕೀಯ ಎದುರಾಳಿಯ ವಿರುದ್ಧ ‘‘ಮೋದಿ ಮುರ್ದಾಬಾದ್’ ಘೋಷಣೆ ಕೂಗಬೇಡಿ ಎಂಬುದೇ ಆ ಸಲಹೆ.
ಅದರ ಬದಲು ಪ್ರೀತಿಯಿಂದ ಬಿಜೆಪಿ ಕಾರ್ಯಕರ್ತರ ಮನಸ್ಸನ್ನು ಗೆಲ್ಲಿರಿ ಎಂದು ಅವರು ಸಲಹೆ ನೀಡಿದ್ದಾರಲ್ಲದೆ, ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ ಎಂದರು.
ಒಡಿಶಾದ ರೂರ್ಕೆಲಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಹುಲ್ ಮಾತನಾಡುತ್ತಿದ್ದಾಗ ಅವರು ನರೇಂದ್ರ ಮೋದಿ ಹೆಸರನ್ನು ಉಲ್ಲೇಖಿಸಿದಾಗಲೆಲ್ಲಾ ಸಭಿಕರು ‘ಮುರ್ದಾಬಾದ್’ ಘೋಷಣೆಗಳನ್ನು ಕೂಗಿದ್ದರು.
‘‘ಈ ಪದಗಳನ್ನು (ಮುರ್ದಾಬಾದ್) ಬಿಜೆಪಿ/ಆರೆಸ್ಸೆಸ್ ಜನರು ಬಳಸುತ್ತಾರೆ. ನಾವು ಕಾಂಗ್ರೆಸ್ಸಿಗರು ಪ್ರೀತಿ ಆದರದ ಮೇಲೆ ನಂಬಿಕೆಯಿರಿಸಿದವರಾಗಿರುವುದರಿಂದ ಇಂತಹ ಪದವನ್ನು ಬಳಸುವುದಿಲ್ಲ ಎಂದು ಅವರು ಹೇಳಿದರು.
ದ್ವೇಷಕ್ಕೆ ಎಡೆಯಿಲ್ಲದಂತೆ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಜಯ ಸಾಧಿಸಬಹುದು, ಒಡಿಶಾದಲ್ಲೂ ಬಿಜು ಜನತಾ ದಳದ ವಿರುದ್ಧ ಇದೇ ರೀತಿ ಜಯ ಸಾಧಿಸಬಹುದು ಎಂದು ಹೇಳಿದರು.