ಎಸ್‌ಡಿಪಿಐನಿಂದ ಧರ್ಮ ಆಧಾರಿತ ರಾಜಕೀಯ: ಎನ್.ಎಸ್.ಕರೀಂ ಆರೋಪ
ಮಂಗಳೂರು, ಫೆ. 7: ಎಸ್‌ಡಿಪಿಐ ಸಂಘಟನೆ ಧರ್ಮದ ಆಧಾರದಲ್ಲಿ ರಾಜಕೀಯ ನಡೆಸುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಶಾಂತಿ ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ ಆರೋಪಿಸಿದ್ದಾರೆ.
ಎಸ್‌ಡಿಪಿಐ ಸಂಘಟನೆ ಇತ್ತೀಚೆಗೆ ಬಾಬರಿ ಮಸೀದಿ ಹಾನಿ ಸಂಬಂಧಿಸಿ ಉಳ್ಳಾಲದಲ್ಲಿ ಬೀದಿ ನಾಟಕ ಹಮ್ಮಿಕೊಂಡಿದ್ದರು. ಇದರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಎಸ್‌ಡಿಪಿಐ ಸಂಘಟನೆಯು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಯು.ಟಿ.ಖಾದರ್ ಅವರ ಕೈವಾಡವಿಲ್ಲದಿದ್ದರೂ ಸುಮ್ಮನೆ ಆರೋಪಿಸುತ್ತಿದ್ದಾರೆ. ಎಸ್‌ಡಿಪಿಐ ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ. ಧರ್ಮದ ವಿಚಾರ ಇಟ್ಟುಕೊಂಡು ಜನರಲ್ಲಿ ಭಯ ಹುಟ್ಟಿಸುವ ಕೆಲಸ ನಡೆಸುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಕೋಮುವಾದಿ ಸಂಘಟನೆಗಳು ಜಿಲ್ಲೆಗೆ ಕೇಡು ತರುವ ಕೆಲಸ ಮಾಡುತ್ತಿದೆ. ರಾಮ ಮಂದಿರ ಕಟ್ಟುವ ವಿಚಾರದಲ್ಲಿ ಮುಸ್ಲಿಮರಾಗಲಿ, ಕಾಂಗ್ರೆಸ್ ಆಗಲಿ ಆಕ್ಷೇಪ ಮಾಡಿಲ್ಲ. ಇದರ ಬಗ್ಗೆ ವಿಚಾರಣೆ ಮಾಡಲು ಸುಪ್ರೀಂಕೋರ್ಟ್ ಇದೆ. ಎಸ್‌ಡಿಪಿಐ ನವರು ಬಾಬರಿ ಮಸೀದಿ ಮೇಲಿನ ಪ್ರೀತಿಯಿಂದ ಬೀದಿ ನಾಟಕ ಮಾಡುತ್ತಿಲ್ಲ, ಮುಸ್ಲಿಂ ಯುವಕರನ್ನು ಸೇರಿಸಿಕೊಂಡು ಸಮಾಜದ ಶಾಂತಿ ಕೆಡಿಸುತ್ತಿದ್ದಾರೆ ಎಂದರು.
ಸಂಘಟನೆಯ ಪ್ರಮುಖರಾದ ರಫೀಕ್ ಕಣ್ಣೂರು, ಲಾರೆನ್ಸ್ ಡಿಸೋಜ, ಜಾರ್ಜ್ ಉಪಸ್ಥಿತರಿದ್ದರು.







