ಅಡುಗೆ ಅನಿಲ ಸ್ಫೋಟ: ನಾಲ್ಕು ಮನೆಗಳು ಸಂಪೂರ್ಣ ಭಸ್ಮ

ಕೊಳ್ಳೇಗಾಲ,ಫೆ.07: ಅಡುಗೆ ಅನಿಲ ಸ್ಫೋಟಗೊಂಡು ನಾಲ್ಕು ಮನೆಗಳು ಸಂಪೂರ್ಣ ಭಸ್ಮವಾಗಿರುವ ಘಟನೆ ತಾಲೂಕಿನ ಪಾಳ್ಯ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಪಾಳ್ಯ ಗ್ರಾಮದ ವೆಂಕಟನಾಯಕ, ನಾಗಮಣಿ, ವೆಂಕಟಮ್ಮ ಹಾಗೂ ಪುಟ್ಟಮಾದಮ್ಮ ಎಂಬವರ ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ತಡರಾತ್ರಿ ಸುಮಾರು 10:30 ರ ಸಮಯದಲ್ಲಿ ವೆಂಕಟನಾಯಕ ಎಂಬವರು ಮನೆಯಲ್ಲಿ ಬಿಸಿನೀರು ಕಾಯಿಸಲು ಬೆಂಕಿ ಹಚ್ಚುವ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಗಮಣಿ, ವೆಂಕಟಮ್ಮ ಹಾಗೂ ಪುಟ್ಟಮಾದಮ್ಮ ಎಂಬವರ ಒಟ್ಟು ನಾಲ್ಕು ಮನೆಗಳು ಬೆಂಕಿಯಿಂದ ಆಹುತಿಯಾಗಿದೆ. ಜನರು ಬೆಂಕಿ ನಂದಿಸಲು ಮುಂದಾದರು. ಬಳಿಕ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಸಂಪೂರ್ಣ ನಂದಿಸಿದರು.
ನಾಲ್ಕು ಮನೆಗಳ ಸಾಮಾಗ್ರಿಗಳು, ಹೆಂಚುಗಳು ಸಂಪೂರ್ಣ ಭಸ್ಮಗೊಂಡಿದ್ದು, ಆದರೆ 4 ಮನೆಗಳಲ್ಲಿದ್ದ ಸುಮಾರು 12 ಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಸಬ್ ಇನ್ಸ್ ಪೆಕ್ಟರ್ ವನರಾಜು ಸ್ಥಳಕ್ಕೆ ಭೇಟಿ ನೀಡಿದರು. ಇಂದು ಬೆಳಿಗ್ಗೆ ಉಪವಿಭಾಗಾಧಿಕಾರಿ ನಿಖಿತಾ.ಎಂ.ಚಿನ್ನಸ್ವಾಮಿ ರವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯಿಂದ ಭಸ್ಮಗೊಂಡಿದ್ದ ಮನೆಯನ್ನು ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದೆ.







