ಉಡುಪಿ: ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ರಾಣಿ ಅಧಿಕಾರ ಸ್ವೀಕಾರ

ಉಡುಪಿ, ಫೆ.7: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ರಾಣಿ ಕೊರ್ಲಪತಿ ಇಂದು ಅಧಿಕಾರ ಸ್ವೀಕರಿಸಿದರು.
ಉಡುಪಿ ಜಿಲ್ಲೆಯಲ್ಲಿ ಸುಮಾರು ಮೂರೂವರೆ ವರ್ಷಗಳ ಕಾಲ ಜಿಪಂನ ಸಿಇಒ ಹಾಗೂ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ಇದೀಗ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿಯಾಗಿ ನಿಯುಕ್ತಿಗೊಂಡಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.
2011ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಹೆಪ್ಸಿಬಾ ರಾಣಿ, 2010ನೇ ಸಾಲಿನ ಯುಪಿಎಸ್‌ಇ ಪರೀಕ್ಷೆಯಲ್ಲಿ ದೇಶಕ್ಕೆ 20ನೇ ರ್ಯಾಂಕ್ ಪಡೆದಿದ್ದರು. ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯವರಾದ ಇವರು ಹೈದರಾಬಾದ್‌ನ ಉಸ್ಮಾನಿಯಾ ವಿವಿಯ ಮಹಿಳಾ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಹೊಸದಿಲ್ಲಿಯ ದಿಲ್ಲಿ ಸ್ಕೂಲ್ ಆಫ್ ಎಕಾನಾಮಿಕ್ಸ್‌ನಿಂದ ಜಿಯೋಗ್ರಫಿಯಲ್ಲಿ ಎಂ.ಎ.ಪದವಿಯನ್ನು ಪಡೆದಿದ್ದರು.
ತರಬೇತಿಯ ಬಳಿಕ 2013ರಲ್ಲಿ ಮಂಡ್ಯ ಸಿಟಿ ಮುನ್ಸಿಪಲ್ ಕೌನ್ಸಿಲ್‌ನ ಆಯುಕ್ತೆಯಾಗಿ ಪ್ರೊಬೇಷನರಿ ಹುದ್ದೆಯಲ್ಲಿದ್ದ ಹೆಪ್ಸಿಬಾ ರಾಣಿ, ಅನಂತರ ಬೀದರ್ ಜಿಲ್ಲೆ ಬಸವಕಲ್ಯಾಣದ ಸಹಾಯಕ ಕಮಿಷನರ್(ಎಸಿ), ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತೆಯಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ಕೆಲಕಾಲ ಸೇವೆ ಸಲ್ಲಿಸಿದ್ದರು.
ಉಡುಪಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುವ ಮುನ್ನ ಅವರು ಧಾರವಾಡದಲ್ಲಿ ಎಸ್‌ಪಿವಿಯ ಆಡಳಿತ ನಿರ್ದೇಶಕಿಯಾಗಿದ್ದರು.








