ಟಿಟಿವಿ ದಿನಕರನ್‌ಗೆ ‘ಪ್ರೆಷರ್ ಕುಕರ್’ ಚಿಹ್ನೆಯನ್ನು ನೀಡಲು ಸುಪ್ರೀಂ ನಕಾರ

ಹೊಸದಿಲ್ಲಿ,ಫೆ.7: ಮಾಜಿ ಎಐಎಡಿಎಂಕೆ ನಾಯಕ ಹಾಗೂ ತಮಿಳುನಾಡು ಶಾಸಕ ಟಿಟಿವಿ ದಿನಕರನ್ ನೇತೃತ್ವದ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ) ಪಕ್ಷಕ್ಕೆ ‘ಪ್ರೆಷರ್ ಕುಕರ್’ ಚಿಹ್ನೆಯನ್ನು ಸದ್ಯಕ್ಕೆ ನೀಡಲು ಸರ್ವೋಚ್ಚ ನ್ಯಾಯಾಲಯವು ಗುರುವಾರ ನಿರಾಕರಿಸಿದೆ.
ಕಳೆದ ವರ್ಷದ ಮಾರ್ಚ್ 9ರಂದು ದಿಲ್ಲಿ ಉಚ್ಚ ನ್ಯಾಯಾಲಯವು ದಿನಕರನ್ ನೇತೃತ್ವದ ಆಗಿನ ಎಐಎಡಿಎಂಕೆ(ಅಮ್ಮಾ) ಬಣಕ್ಕೆ ಪ್ರೆಷರ್ ಕುಕರ್‌ನಂತಹ ಸಾಮಾನ್ಯ ಚುನಾವಣೆ ಚಿಹ್ನೆಯನ್ನು ಮತ್ತು ಹೆಸರನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶ ನೀಡಿತ್ತು.
ಚಿಹ್ನೆ ಹಂಚಿಕೆ ಕುರಿತು ಬಾಕಿಯಿರುವ ಪ್ರಕರಣವನ್ನು ಉಚ್ಚ ನ್ಯಾಯಾಲಯವು ನಾಲ್ಕು ವಾರಗಳಲ್ಲಿ ಇತ್ಯರ್ಥಗೊಳಿಸದಿದ್ದರೆ ಚುನಾವಣಾ ಆಯೋಗವು 2018,ಮಾ.9ರ ಆದೇಶದಂತೆ ಮುಂದುವರಿಯಬಹುದು ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಅಜಯ ರಸ್ತೋಗಿ ಅವರ ಪೀಠವು ತಿಳಿಸಿತು.
ತಮಿಳುನಾಡಿನಲ್ಲಿ ತೆರವಾಗಿರುವ ಸ್ಥಾನಗಳಿಗೆ ನಾಲ್ಕು ವಾರಗಳಲ್ಲಿ ಚುನಾವಣೆಗಳನ್ನು ಪ್ರಕಟಿಸಿದರೆ ಚುನಾವಣಾ ಆಯೋಗವು ಉಚ್ಚ ನ್ಯಾಯಾಲಯದ ಆದೇಶದಂತೆ ದಿನಕರನ್ ಪಕ್ಷಕ್ಕೆ ಚಿಹ್ನೆಯನ್ನು ನೀಡಬಹುದು ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತು.
ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಬಣವು ತಕರಾರು ಎತ್ತಿದ ಬಳಿಕ ಉಚ್ಚ ನ್ಯಾಯಾಲಯದ ಆದೇಶವನ್ನು ತಡೆಹಿಡಿದಿದ್ದ ತನ್ನ ಹಿಂದಿನ ಆದೇಶವನ್ನೂ ಸವೋಚ್ಚ ನ್ಯಾಯಾಲಯವು ತೆರವುಗೊಳಿಸಿತು.
ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವನ್ ಅವರ ನೇತೃತ್ವದ ಗುಂಪಿಗೆ ‘ಎರಡು ಎಲೆಗಳ’ ಚಿಹ್ನೆಯನ್ನು ನೀಡಿದ್ದ ಚುನಾವಣಾ ಆಯೋಗದ 2107,ನ.23ರ ಆದೇಶವನ್ನು ಪ್ರಶ್ನಿಸಿ ತನ್ನ ಮುಖ್ಯ ದಾವೆಯಲ್ಲಿ ದಿನಕರನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು.
ಮುಖ್ಯದಾವೆಯು ಬಾಕಿಯಿರುವವರೆಗೆ ತನ್ನ ಬಣಕ್ಕೆ ಹೆಸರು ಮತ್ತು ಚಿಹ್ನೆಯನ್ನು ನೀಡಬೇಕು,ಇಲ್ಲದಿದ್ದರೆ ಚುನಾವಣಾ ಆಯೋಗವು ಅದನ್ನೊಂದು ಪ್ರತ್ಯೇಕ ಪಕ್ಷವಾಗಿ ಘೋಷಿಸಬಹುದು ಎಂದು ದಿನಕರನ್ ತನ್ನ ಮಧ್ಯಂತರ ಅರ್ಜಿಯಲ್ಲಿ ಕೋರಿದ್ದರು.
ಕಳೆದ ವರ್ಷ ಆರ್.ಕೆ.ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ತಾನು ಪ್ರೆಷರ್ ಕುಕರ್ ಚಿಹ್ನೆಯಡಿ ಸ್ಪರ್ಧಿಸಿ 40,000ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರಿಂದ ಅದನ್ನೇ ಚುನಾವಣಾ ಚಿಹ್ನೆಯಾಗಿ ನೀಡುವಂತೆ ದಿನಕರನ್ ಕೇಳಿಕೊಂಡಿದ್ದರು.







