ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡಲು ಪೂರಕ ವಾತಾವರಣ: ನಿರ್ಗಮನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ, ಫೆ.7: ಉಡುಪಿ ಜಿಲ್ಲೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿ ಸಲು ಪೂರಕ ವಾತಾವರಣವಿದ್ದು, ಇಲ್ಲಿ ತುಂಬ ಬುದ್ದಿವಂತ ಮತ್ತು ಉತ್ತಮ ಸಹಕಾರ ನೀಡುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿದ್ದಾರೆ ಎಂದು ಬೆಂಗಳೂರಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ಭಡ್ತಿ ಹೊಂದಿ ಉಡುಪಿ ಜಿಲ್ಲೆಯಿಂದ ನಿರ್ಗಮಿಸುತ್ತಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಗುರುವಾರ ಮಣಿಪಾಲದ ಅಟಲ್‌ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ದಲ್ಲಿರುವ ವಿವಿಧ ಇಲಾಖೆಗಳು, ತಾಲೂಕು ಆಡಳಿತ, ತಾಪಂ ಮೊದಲಾದ ಕಚೇರಿಗಳ ವತಿಯಿಂದ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ 3ವರ್ಷ 2ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸು ವುದಕ್ಕೆ ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ತುಂಬ ಒಳ್ಳೆಯ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಇಲ್ಲಿ ತಂಡವಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗಿದೆ. ಕಳೆದ ಮಳೆಗಾಲದಲ್ಲಿ ನೆರೆ ಬಂದಾಗ, ಚುನಾವಣಾ ಸಮಯದಲ್ಲಿ, ರಾಷ್ಟ್ರಪತಿ ಭೇಟಿ ಮೊದಲಾದ ಸಂದರ್ಭಗಳಲ್ಲಿ ಇದು ಅನುಭವಕ್ಕೆ ಬಂದಿದೆ. ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಯಾರಿಗೇ ಆಗಲಿ ಇಂಥ ಕೆಲಸವನ್ನು ವಹಿಸಿದರೆ ಅದನ್ನು ಪೂರ್ಣ ಪರಿಶ್ರಮದಿಂದ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತಾರೆ. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಹೆಫ್ಸಿಬಾ ರಾಣಿ ಅವರಿಗೆ ಕೂಡ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಇದೇ ರೀತಿಯ ಸಹಕಾರ, ಬೆಂಬಲ ನೀಡಿ ಎಂದು ಪ್ರಿಯಾಂಕ ಮೇರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಮಾತನಾಡಿ, ಸರಕಾರಿ ಅಧಿಕಾರಿಗಳು ಬರುವುದು ಹೋಗುವುದು ಸಹಜ. ಆದರೆ ಅವರು ಬಂದು ಹೋಗುವಾಗ ಉಂಟಾಗುವ ಜನರ ಭಾವನೆ ಮುಖ್ಯ. ಕಳೆದ ಒಂದು ವರ್ಷದಲ್ಲಿ ಚುನಾವಣೆ ಸಂದರ್ಭಗಳನ್ನು ಜಿಲ್ಲಾಧಿಕಾರಿಯಾಗಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಿ, ಅದರ ಮೂಲಕ ಜನ ಮಾನಸದಲ್ಲಿ ಅಚ್ಚೊತ್ತಿ ಇಲ್ಲಿಂದ ಹೆಚ್ಚಿನ ಕರ್ತವ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಹೋಗುತ್ತಿದ್ದಾರೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನೂತನ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ. ರೂಪೇಶ್, ಅರಣ್ಯ ಇಲಾಖೆಯ ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಪ್ರಭಾಕರನ್ ಉಪಸ್ಥಿತರಿದ್ದರು. ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಕೊರಗ ಸಮುದಾಯದ ಮುಖಂಡ ಗಣೇಶ ಕೊರಗ ಅವರು ಅಭಿನಂದಿಸಿ ಮಾತನಾಡಿದರು.
ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿ ಸ್ವಾಗತಿಸಿದರು. ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್‌ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







