ನಾನು ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ಕಾನೂನು ರದ್ದು: ಕಾಂಗ್ರೆಸ್ ನಾಯಕಿ
ಹೊಸದಿಲ್ಲಿ, ಫೆ.7: ಮುಂದಿನ ರಾಷ್ಟ್ರೀಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ನಿಷೇಧಿಸುವ ಉದ್ದೇಶಿತ ಕಾನೂನನ್ನು ರದ್ದುಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕಿ ಸುಷ್ಮಿತಾ ದೇವ್ ತಿಳಿಸಿದ್ದಾರೆ.
2019ರಲ್ಲಿ ಕಾಂಗ್ರೆಸ್ ಸರಕಾರ ರಚಿಸಲಿದೆ ಮತ್ತು ತ್ರಿವಳಿ ತಲಾಖ್ ನಿಷೇಧಿಸುವ ಕಾನೂನು ರದ್ದಾಗಲಿದೆ. ಇದು ನಾವು ನೀಡುವ ವಾಗ್ದಾನವಾಗಿದೆ ಎಂದು ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸುಷ್ಮಿತಾ ತಿಳಿಸಿದ್ದಾರೆ.
ಈ ಕಾನೂನು ಮುಸ್ಲಿಮ್ ಮಹಿಳೆಯರ ಸಬಲೀಕರಣದ ಉದ್ದೇಶ ಹೊಂದಿದೆ ಎಂದು ಹಲವರು ತಿಳಿಸಿದ್ದಾರೆ. ಆದರೆ , ಈ ಕಾನೂನು ಮುಸ್ಲಿಮ್ ಪುರುಷರ ವಿರುದ್ಧ ಬಿಜೆಪಿ ಹೂಡಿರುವ ಅಸ್ತ್ರ ಆಗಿರುವುದರಿಂದ ನಾವು ಇದನ್ನು ವಿರೋಧಿಸುತ್ತೇವೆ ಎಂದವರು ತಿಳಿಸಿದ್ದಾರೆ. ಕಾಂಗ್ರೆಸ್‌ನ ಈ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಇದು ತುಷ್ಟೀಕರಣದ ಪರಮೋಚ್ಛ ಕ್ರಮವಾಗಿದೆ ಎಂದು ಟೀಕಿಸಿದೆ.
ತ್ರಿವಳಿ ತಲಾಖ್ ಕಾನೂನನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಈ ರೀತಿಯ ಪ್ರತಿಗಾಮಿ ಚಿಂತನೆಯ ಮೂಲಕ ಅವರು ಏನನ್ನು ಸಾಧಿಸಹೊರಟಿದ್ದಾರೆ. ಸುಪ್ರೀಂಕೋರ್ಟ್‌ನ ಬಗ್ಗೆ ಅವರಿಗೆ ಯಾವುದೇ ಗೌರವವಿಲ್ಲ ಎಂದು ಬಿಜೆಪಿ ಮುಖಂಡ ಸಂಬಿತ್ ಪಾತ್ರ ಹೇಳಿದ್ದಾರೆ. ತ್ರಿವಳಿ ತಲಾಖ್ ಮಸೂದೆಯಲ್ಲಿ ಪತಿಗೆ ಮೂರು ವರ್ಷದ ಜೈಲುಶಿಕ್ಷೆ ವಿಧಿಸಲು ಅವಕಾಶ ಇದ್ದು ಇದನ್ನು ವಿರೋಧಿಸುವುದಾಗಿ ಕಾಂಗ್ರೆಸ್ ಹೇಳುತ್ತಿದೆ.