ಕೆಎಫ್‌ಡಿ ಸಮೀಕ್ಷೆ: ಉಡುಪಿ ಜಿಲ್ಲೆಗೆ ಬೆಂಗಳೂರಿನಿಂದ ತಂಡ

ಉಡುಪಿ, ಫೆ.7: ಜಿಲ್ಲೆಯಲ್ಲಿ ಮಂಗನಕಾಯಿಲೆಯ ಕುರಿತಂತೆ ಸಮೀಕ್ಷೆ ನಡೆಸಲು ಬೆಂಗಳೂರಿನಿಂದ ಆರೋಗ್ಯ ಇಲಾಖೆಯ ನಿವೃತ್ತ ಮುಖ್ಯ ಕಾರ್ಯದರ್ಶಿ ಮದನ ಗೋಪಾಲ್ ನೇತೃತ್ವದ ತಂಡವೊಂದು ಇಂದು ಉಡುಪಿ ಜಿಲ್ಲೆಗೆ ಆಗಮಿಸಿದ್ದು, ಸತ್ತ ಮಂಗಗಳಲ್ಲಿ ಕೆಎಫ್‌ಡಿ ವೈರಸ್ ಪತ್ತೆಯಾದ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಿತು.
ತಂಡ ಅತೀ ಹೆಚ್ಚು ಮಂಗಗಳು ಸತ್ತ ಸಿದ್ಧಾಪುರ, ಹೊಸಂಗಡಿ ಪ್ರದೇಶಗಳಿಗೆ ತೆರಳಿ ವಿವರವಾದ ಸಮೀಕ್ಷೆ ನಡೆಸಿತು. ಜಿಲ್ಲೆಯಲ್ಲಿ ಮಂಗನಕಾಯಿಲೆ ಬಾರ ದಂತೆ ತಡೆಗಟ್ಟು ಕೈಗೊಂಡ ವಿವಿಧ ಕ್ರಮಗಳ ಕುರಿತೂ ತಂಡ ವಿವರವಾದ ಪರಿಶೀಲನೆ ನಡೆಸಿತು.
ಆರೋಗ್ಯ ಇಲಾಖೆಯ ಅಧಿಕಾರಿಗಳು ಮೂರು ತಾಲೂಕುಗಳಲ್ಲಿ ಕೈಗೊಂಡ ತುರ್ತು ಕ್ರಮದ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ ತಂಡ, ಈಗ ಮಂಗಗಳಲ್ಲಿ ಮಾತ್ರ ಕಾಣಿಸಿಕೊಂಡಿರುವ ಕೆಎಫ್‌ಡಿ ವೈರಸ್, ಮನುಷ್ಯನಿಗೆ ಬಾಧಿಸದಂತೆ ತೀವ್ರ ನಿಗಾ ವಹಿಸುವಂತೆ ಸೂಚಿಸಿತು ಎಂದು ಮಂಗನಕಾಯಿಲೆಯ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದರು.
ಸಂಚಾರಿ ಘಟಕ ಉದ್ಘಾಟನೆ: ಈ ನಡುವೆ ಕುಂದಾಪುರ ತಾಲೂಕು ವೈದ್ಯಾಧಿಕಾರಿಗಳ ಕಚೇರಿಗೆ ತಲಾ 55 ಎಂಎಲ್‌ನ 950 ಡಿಎಂಪಿ ತೈಲದ ಬಾಟಲಿಗಳು ಬಂದಿದ್ದು, ಇವುಗಳನ್ನು ವಿವಿಧ ಖಾಸಗಿ ಸಂಘಟನೆಗಳು ಪಡೆದುಕೊಂಡವು. 74 ಉಳ್ಳೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಹಾಗೂ ಕಮಲಶಿಲೆಯ ಬ್ರಾಹ್ಮಿ ದುರ್ಗಾ ಪರಮೇಶ್ವರಿ ದೇವಸ್ಥಾನ ಡಿಎಂಪಿ ತೈಲಕ್ಕೆ ಬೇಡಿಕೆ ಇರಿಸಿದ್ದು, ತಾವೇ ಖರೀದಿಸಿ ಗ್ರಾಮದ ಅಗತ್ಯವುಳ್ಳ ಜನರಿಗೆ ವಿತರಿಸುತ್ತಿವೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಈ ನಡುವೆ ಕುಂದಾಪುರದಲ್ಲಿ ಮಂಗನಕಾಯಿಲೆ ಕುರಿತು ಜನಜಾಗೃತಿ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ‘ಸಂಚಾರಿ ಅರೋಗ್ಯ ತಪಾಸಣಾ ವಿಶೇಷ ಘಟಕ’ ಸಂಚಾರಿ ವಾಹನದ ಮೂಲಕ ಹಳ್ಳಿ ಹಳ್ಳಿಯ ಜನರಿಗೆ ಜಾಗ್ರತೆ ಮೂಡಿಸಿ ಸ್ಥಳದಲ್ಲಿಯೇ ಔಷದೋ ಪಚಾರ ನೀಡುವ ವಿನೂತನ ಕಾರ್ಯಕ್ರಮಕ್ಕೂ ಇಂದು ಚಾಲನೆ ನೀಡಲಾಯಿತು.
ಬೈಂದೂರಿನ ವಂಡ್ಸೆ ಜಿಪಂ ಸದಸ್ಯ ಹಾಗೂ ಅರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ಇಂದು ಈ ವಾಹನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಿರೂರು ಜಿಪಂ ಸದಸ್ಯ ಸುರೇಶ ಬಟ್ವಾಡಿ, ಬೈಂದೂರು ಜಿಪಂ ಸದಸ್ಯ ಶಂಕರ ಪೂಜಾರಿ, ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಸದಾಶಿವ ಪಡುವರಿ, ಜೈಸನ್ ಎಂ. ಡಿ, ಸುರೇಶ ಬಿಜೂರು, ಬೈಂದೂರು ಸಮುದಾಯ ಅರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರೇಮಾನಂದ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಹಾಗೂ ಇತರರು ಉಪಸ್ಥಿತರಿದ್ದರು.
ಈ ವಾಹನ ಪ್ರತಿ ಸೋಮವಾರ ಕೊಲ್ಲೂರು, ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ, ಮಂಗಳವಾರ ಕಿರಿಮಂಜೇಶ್ವರ ಮತ್ತು ಆಲೂರು, ಬುಧವಾರ ಶಿರೂರು ಮತ್ತು ಬೈಂದೂರು, ಗುರುವಾರ ಸಿದ್ಧಾಪುರ ಮತ್ತು ಹಳ್ಳಿಹೊಳೆ, ಶುಕ್ರವಾರ ಹಾಲಾಡಿ ಮತ್ತು ಬೆಳ್ವೆ ಹಾಗೂ ಶನಿವಾರ ಕಂಡ್ಲೂರು ಮತ್ತು ಬಿದ್ಕಲ್‌ಕಟ್ಟೆ ಪಿಎಚ್‌ಸಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ ಎಂದು ಡಾ.ಉಡುಪ ತಿಳಿಸಿದ್ದಾರೆ.
ಮಣಿಪಾಲ ಪ್ರಯೋಗಾಲಯದ ತಂಡವಿಂದು ಬೆಳ್ವೆ ಪರಿಸರದಲ್ಲಿ ಉಣ್ಣಿ ಸರ್ವೇಕ್ಷಣೆಯ ಕಾರ್ಯವನ್ನು ನಡೆಸಿದೆ.







