ಮಂಗಳೂರು: ದರೋಡೆ ಪ್ರಕರಣದ ಏಳು ಅರೋಪಿಗಳ ಸೆರೆ
ಮಂಗಳೂರು, ಫೆ.7: ನಗರದ ಕಂಕನಾಡಿ ಜಂಕ್ಷನ್ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಮಂಗಳವಾರ ನಡೆದ ದರೋಡೆ ಪ್ರಕರಣದ ಏಳು ಆರೋಪಿಗಳನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಭಟ್ಕಳದ ಮುಹಮ್ಮದ್ ಸಬೀರ್ (31), ಮುಹಮ್ಮದ್ ನವೀದ್ ಯಾನೆ ನವೀದ್ ಹುಸೇನ್ ಪೀರಾ (29), ಖ್ವಾಜಾ ಸಾಬ್ (28), ಮುಹಮ್ಮದ್ ನಬೀಲ್ ಸಾಬ್ (31), ಸೈಯದ್ ಹುಸೇನ್ (32), ಸೈಯದ್ ಫಯಾಝ್ (31), ನಾಸೀರ್ ಶೇಕ್ (21) ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಗ್ಗೆ ಸುಮಾರು 9:30ಕ್ಕೆ ಮಂಗಳೂರಿಗೆ ಮೀನಿನ ವ್ಯಾಪಾರಕ್ಕೆ ಬಂದಿದ್ದ ಮಹಾರಾಷ್ಟ್ರದ ರತ್ನಗಿರಿಯ ಆಸೀಫ್ ಮುಹಮ್ಮದ್ ನಕ್ವಾ ಅವರಿಂದ 5 ಲಕ್ಷ ರೂಪಾಯಿನ್ನು ಅಪರಿಚಿತ ಬಿಳಿ ಬಣ್ಣದ ಟವೇರಾ ಕಾರಿನಲ್ಲಿ ಬಂದಿದ್ದ 6-7 ಮಂದಿಯ ತಂಡ ದರೋಡೆ ಮಾಡಿಕೊಂಡು ಹೋಗಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಗುರುವಾರ 7 ಮಂದಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಟವೇರಾ ಕಾರು, 5 ಲಕ್ಷ ರೂ. ನಗದು ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿ ರಾಮರಾವ್ ಅವರ ಮಾರ್ಗದರ್ಶನದಲ್ಲಿ ಕಂಕನಾಡಿ ನಗರ ಠಾಣೆಯ ನಿರೀಕ್ಷಕ ಅಶೋಕ ಪಿ., ಉಪ ನಿರೀಕ್ಷಕ ಪ್ರದೀಪ್ ಟಿ.ಆರ್., ಅಪರಾಧ ಪತ್ತೆ ವಿಭಾಗದ ಉಪ ನಿರೀಕ್ಷಕಿ ಜಾನಕಿ, ಎಎಸ್ಸೈ ಗಿಲ್ಬರ್ಟ್, ಸಿಬ್ಬಂದಿಗಳಾದ ಮದನ್, ಸಂತೋಷ್, ವಿನೋದ್, ರಾಜೇಶ್, ರಘುವೀರ್, ನೂತನ್, ಸಂದೀಪ್, ಮಾಲತೇಶ್, ಕಾರ್ತಿಕ್ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







