ಫೆಡ್ ಕಪ್: ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟ ಅಂಕಿತಾ ರೈನಾ

ಅಸ್ತಾನ(ಕಝಕ್‌ಸ್ತಾನ), ಫೆ.7: ಕೆಳ ರ್ಯಾಂಕಿನ ಥಾಯ್ಲೆಂಡ್ ತಂಡದಿಂದ ಅನಿರೀಕ್ಷಿತ ಪ್ರತಿರೋಧ ಎದುರಿಸಿದ ಭಾರತ ಗುರುವಾರ ನಡೆದ ಫೆಡ್ ಕಪ್ ಟೆನಿಸ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಅಂಕಿತಾ ರೈನಾ ಸಾಹಸದಿಂದ 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.
ಮೊದಲಿಗೆ ಟೆನಿಸ್ ಅಂಗಳಕ್ಕೆ ಇಳಿದ ಕರ್ಮಾನ್ ಕೌರ್ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ 712ನೇ ರ್ಯಾಂಕಿನ ನುಡಿಂಡಾ ಲಯಾಂಗ್‌ನಮ್ ವಿರುದ್ಧ 2-6, 6-3, 3-6 ಸೆಟ್‌ಗಳ ಅಂತರದಿಂದ ಆಘಾತಕಾರಿ ಸೋಲುಂಡರು.
ಆ ಬಳಿಕ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳಲ್ಲಿ ಜಯ ಸಾಧಿಸಿದ ಅಂಕಿತಾ ಭಾರತಕ್ಕೆ ಮುನ್ನಡೆ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು.
ಭಾರತದ ನಂ.1 ಸಿಂಗಲ್ಸ್ ಆಟಗಾರ್ತಿ ಅಂಕಿತಾ ಟೂರ್ನಿಯ ಎರಡನೇ ಮಹಿಳೆಯರ ಸಿಂಗಲ್ಸ್ ನಲ್ಲಿ ಪಿಯಾಂಗ್‌ಟರ್ನ್ ಪ್ಲಿಪ್‌ಯೆಚ್ ವಿರುದ್ಧ 6-7(3), 6-2, 6-4 ಸೆಟ್‌ಗಳಿಂದ ಜಯ ಸಾಧಿಸಿದರು. ಆ ಮೂಲಕ ಪಂದ್ಯವನ್ನು 1-1 ರಿಂದ ಸಮಬಲಕ್ಕೆ ತಂದರು.
ಕರ್ಮಾನ್‌ರೊಂದಿಗೆ ಡಬಲ್ಸ್ ಪಂದ್ಯವನ್ನು ಆಡಿದ ಅಂಕಿತಾ 2 ಗಂಟೆ, 38 ನಿಮಿಷಗಳ ಹೋರಾಟದಲ್ಲಿ ಥಾಯ್ಲೆಂಡ್ ಜೋಡಿ ಪಿಯಾಂಗ್‌ಟರ್ನ್ ಹಾಗೂ ನುಡಿಂಡಾರನ್ನು 6-4, 6-7(6), 7-5 ಸೆಟ್‌ಗಳಿಂದ ಮಣಿಸಿದರು.
ಭಾರತ ಶುಕ್ರವಾರ ಆತಿಥೇಯ ಕಝಕ್‌ಸ್ತಾನವನ್ನು ಎದುರಿಸಲಿದೆ.







