ಖತರ್ ಶ್ರೇಷ್ಠ ಸಾಧನೆ
ಫಿಫಾ ರ್ಯಾಂಕಿಂಗ್

ದುಬೈ, ಫೆ.7: ಏಶ್ಯಕಪ್ ಫುಟ್ಬಾಲ್‌ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಖತರ್ 26 ವರ್ಷಗಳಲ್ಲೇ ಅತ್ಯುತ್ತಮ 38 ಸ್ಥಾನ ಏರಿಕೆ ಕಂಡು ಜೀವನಶ್ರೇಷ್ಠ 55ನೇ ಸ್ಥಾನ ತಲುಪಿದೆ. ಕಳೆದ ವಾರ ಖತರ್ ಯುಎಇನಲ್ಲಿ ನಡೆದ ಏಶ್ಯಕಪ್ ಫುಟ್ಬಾಲ್ ಫೈನಲ್‌ನಲ್ಲಿ ಜಪಾನ್ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿದಿತ್ತು. 2022ರ ವಿಶ್ವಕಪ್ ಆತಿಥ್ಯ ವಹಿಸಲಿರುವ ಖತರ್ ದೊಡ್ಡ ಖಂಡದ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು 93ನೇ ಸ್ಥಾನದಿಂದ 38 ಸ್ಥಾನ ಏರಿಕೆ ಕಂಡಿದೆ. ಫೈನಲ್‌ಗೆ ತಲುಪುವ ಮುನ್ನ ಸ್ಥಳೀಯ ಬಲಿಷ್ಠ ತಂಡಗಳಾದ ಸೌದಿ ಅರೇಬಿಯ, ಇರಾಕ್ ಮತ್ತು ದ.ಕೊರಿಯಗಳಿಗೆ ಮಣ್ಣು ಮುಕ್ಕಿಸಿತ್ತು. ಏಶ್ಯನ್ ಫುಟ್ಬಾಲ್ ಒಕ್ಕೂಟದಿಂದ ಖತರ್ 5ನೇ ಗರಿಷ್ಠ ರ್ಯಾಂಕಿನ ತಂಡವಾಗಿದೆ. ಇರಾನ್(22), ಜಪಾನ್(27), ದ.ಕೊರಿಯ(38) ಹಾಗೂ ಆಸ್ಟ್ರೇಲಿಯ(42) ಖತರ್‌ಗಿಂತ ಹೆಚ್ಚಿನ ರ್ಯಾಂಕ್ ಹೊಂದಿರುವ ತಂಡಗಳು. ಬೆಲ್ಜಿಯಂ ವಿಶ್ವ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ತಂಡವಾಗಿದೆ.
►ನೂರರ ಪಟ್ಟಿಯಿಂದ ಜಾರಿದ ಭಾರತ
ಇ ದೇ ವೇಳೆ ಯುಎಇಯಲ್ಲಿ ಏಶ್ಯಕಪ್ ಲೀಗ್ ಪಂದ್ಯಗಳಲ್ಲಿ ಬೆನ್ನುಬೆನ್ನಿಗೆ ಸೋಲು ಅನುಭವಿಸಿದ ಭಾರತ ಫುಟ್ಬಾಲ್ ತಂಡ ಅಗ್ರ 100ರ ರ್ಯಾಂಕಿಂಗ್ ಪಟ್ಟಿಯಿಂದ ಹೊರಬಿದ್ದಿದೆ. ಈ ಮೊದಲು 97ನೇ ಸ್ಥಾನದಲ್ಲಿದ್ದ ಸುನೀಲ್ ಚೆಟ್ರಿ ಬಳಗ 6 ಸ್ಥಾನ ಇಳಿಕೆ ಕಂಡು 103ನೇ ಸ್ಥಾನ ತಲುಪಿದೆ. ಎಎಫ್‌ಸಿ ರ್ಯಾಂಕಿಂಗ್‌ನಲ್ಲೂ 2 ಸ್ಥಾನ ಇಳಿಕೆ ಕಂಡು 18ನೇ ಸ್ಥಾನಕ್ಕೆ ಜಾರಿದೆ.





