ಗೆಲುವಿನೊಂದಿಗೆ ದ.ಆಫ್ರಿಕ ಪ್ರವಾಸ ಮುಗಿಸಿದ ಪಾಕಿಸ್ತಾನ ಕ್ರಿಕೆಟ್ ತಂಡ
ಸರಣಿ 2-1ರಿಂದ ಹರಿಣಗಳ ವಶ
ಸೆಂಚೂರಿಯನ್, ಫೆ.7: ಇಲ್ಲಿಯ ಸೂಪರ್‌ಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯವನ್ನು 27 ರನ್‌ಗಳಿಂದ ಗೆದ್ದುಕೊಂಡ ಪಾಕ್ ತಂಡ ದ.ಆಫ್ರಿಕದ ಪ್ರವಾಸವನ್ನು ಜಯದೊಂದಿಗೆ ಕೊನೆಗೊಳಿಸಿದೆ. ಆದರೆ ಸರಣಿಯನ್ನು ದ.ಆಫ್ರಿಕ 2-1ರಿಂದ ಈಗಾಗಲೇ ಗೆದ್ದುಕೊಂಡಿದೆ.
ಟಾಸ್ ಗೆದ್ದ ದ.ಆಫ್ರಿಕ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಬ್ಯಾಟಿಂಗ್ ಆರಂಭಿಸಿದ ಪಾಕ್ ಪರ ಮುಹಮ್ಮದ್ ರಿಝ್ವಾನ್(26) ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ಆಸಿಫ್ ಅಲಿ(25) ಹಾಗೂ ಬಾಬರ್ ಅಝಮ್(23) ಉತ್ತಮ ಕೊಡುಗೆ ನೀಡಿದರು. ಪಾಕ್‌ನ ಏಳು ದಾಂಡಿಗರು ಎರಡಂಕಿ ಗಡಿ ದಾಟಿದ್ದು ವಿಶೇಷ. ತನ್ನ ಪಾಲಿನ ನಿಗದಿತ 20 ಓವರ್‌ಗಳಲ್ಲಿ ಪಾಕ್ 9 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು.
ದ.ಆಫ್ರಿಕ ಪರ ಬ್ಯುರೊನ್ ಹೆಂಡ್ರಿಕ್ಸ್ 14 ರನ್ ನೀಡಿ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಸ್ಪರ್ಧಾತ್ಮಕ ಗೆಲುವಿನ ಗುರಿ ಬೆನ್ನಟ್ಟಿದ ದ. ಆಫ್ರಿಕ ತಂಡವನ್ನು ಪಾಕ್ ಎಡಗೈ ಸ್ಪಿನ್ನರ್ ಇಮಾದ್ ವಸೀಂ ಹಾಗೂ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ ಆರಂಭದಲ್ಲೇ ಕಾಡಿದರು. ಹರಿಣಗಳ ಪರ ಕ್ರಿಸ್ ಮೊರಿಸ್(55) ಹಾಗೂ ರಸ್ಸಿ ವ್ಯಾನ್ ಡರ್ ಡಸೆನ್(41) ಅತ್ಯಧಿಕ ಸ್ಕೋರ್ ಗಳಿಸಿದ ಆಟಗಾರರನೆನಿಸಿಕೊಂಡರು. ಅಂತಿಮವಾಗಿ ದ.ಆಫ್ರಿಕ 141 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. ಪಾಕ್ ಪರ ಮುಹಮ್ಮದ್ ಆಮಿರ್(27ಕ್ಕೆ 3) ಹಾಗೂ ಶಾದಾಬ್ ಖಾನ್(34ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶನದಿಂದ ಗಮನಸೆಳೆದರು.







