ಡೇವಿಸ್ ಕಪ್: ಪಾಕ್ ವಿರುದ್ಧ ಆಡಲಿರುವ ಭಾರತ
ಪುಣೆ, ಫೆ.7: ಈ ವರ್ಷದ ಸೆಪ್ಟಂಬರ್‌ನಲ್ಲಿ ಆರಂಭವಾಗಲಿರುವ ಡೇವಿಸ್ ಕಪ್ ಏಶ್ಯ ಒಶಿನಿಯಾ ವಲಯ ಗುಂಪು 1ರಲ್ಲಿ ಪಾಕ್ ತಂಡದ ವಿರುದ್ಧ ಭಾರತ ಸ್ಪರ್ಧೆ ನಡೆಸಲಿದೆ. ಬುಧವಾರ ಲಂಡನ್‌ನಲ್ಲಿರುವ ಅಂತರ್‌ರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ(ಐಟಿಎಫ್) ಮುಖ್ಯ ಕಚೇರಿಯಲ್ಲಿ ಡ್ರಾ ವನ್ನು ಘೋಷಿಸಲಾಗಿದೆ.
ಫೇವರಿಟ್ ತಂಡವಾಗಿ ಟೂರ್ನಿ ಪ್ರವೇಶಿಸಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಿದರೆ 2020ರ ವಿಶ್ವ ಗ್ರೂಪ್ ಕ್ವಾಲಿಫೈಯರ್ಸ್‌ಗೆ ಮರಳಬಹುದಾಗಿದೆ. ಭಾರತ ಹಾಗೂ ಪಾಕಿಸ್ತಾನಗಳ ಮಧ್ಯೆ ಪ್ರಮುಖ ಕ್ರೀಡಾ ಟೂರ್ನಿ ನಡೆಯದೆ ದಶಕಗಳ ಮೇಲಾಯಿತು. ಕೇಂದ್ರ ಸರಕಾರ ದ್ವಿಪಕ್ಷೀಯ ಪಂದ್ಯಗಳಿಗೆ ಯಾವುದೇ ಅವಕಾಶ ಮಾಡಿಕೊಟ್ಟಿಲ್ಲ.
ಆದರೆ ಐಟಿಎಫ್ ನಿಯಮಗಳ ಪ್ರಕಾರ ಯಾವುದೇ ಕಾರಣದಿಂದ ಒಂದು ತಂಡ ಪ್ರದರ್ಶನ ನೀಡದಿದ್ದರೆ ಆ ತಂಡ ಟೂರ್ನಿಯನ್ನು ತಪ್ಪಿಸಿಕೊಂಡಂತಾಗುತ್ತದೆ ಎಂದಾಗುತ್ತದೆ. ‘‘ಪಾಕಿಸ್ತಾನದಲ್ಲಿ ಕೆಲವು ವರ್ಷಗಳ ಹಿಂದೆ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲಾದ ದಾಳಿಯ ಪರಿಣಾಮ ಐಟಿಎಫ್ ಪಾಕಿಸ್ತಾನಕ್ಕೆ ಯಾವುದೇ ಅಂತರ್‌ರಾಷ್ಟ್ರೀಯ ಟೂರ್ನಿ ಆತಿಥ್ಯ ವಹಿಸಲು ಅನುಮತಿ ನೀಡಿಲ್ಲ. ಪಾಕಿಸ್ತಾನ ಆಡುವ ಪಂದ್ಯಗಳನ್ನು ತಟಸ್ಥ ಸ್ಥಳಗಳಲ್ಲಿ ಆಯೋಜಿಸಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರವನ್ನು ಐಟಿಎಫ್ ತೆಗೆದುಕೊಂಡಿದೆ’’ ಎಂದು ಮೂಲಗಳು ತಿಳಿಸಿವೆ.







