ಆರಂಭದಲ್ಲೆ ಬಜೆಟ್ ಪ್ರತಿ ನೀಡಲು ಯಡಿಯೂರಪ್ಪ ಆಗ್ರಹ

ಬೆಂಗಳೂರು, ಫೆ. 7: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ (ಫೆ.8) ಮಂಡಿಸಲಿರುವ ಆಯವ್ಯಯ ಪ್ರತಿಯನ್ನು ವಿಧಾನಸಭೆಯಲ್ಲಿ ಸಂಪೂರ್ಣ ಓದಿ ಮುಗಿಸಿದ ನಂತರ ಎಲ್ಲ ಸದಸ್ಯರಿಗೂ ವಿತರಿಸಬೇಕು ಎಂಬ ತೀರ್ಮಾನಕ್ಕೆ ವಿಪಕ್ಷ ನಾಯಕ ಯಡಿಯೂರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಜೆಟ್ ಮಂಡನೆ ದಿನ ಮುಖ್ಯಮಂತ್ರಿ ಭಾಷಣ ಪ್ರಾರಂಭಿಸಿದ ನಂತರ ಎಲ್ಲ ಸದಸ್ಯರುಗಳಿಗೂ ವಿತರಿಸುವ ಸಂಪ್ರದಾಯ ಇದೆ. ಅದೇ ಸಂಪ್ರದಾಯವನ್ನು ಈಗಲೂ ಮುಂದುವರೆಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ಯಡಿಯೂರಪ್ಪ, ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಆಯವ್ಯಯ ಭಾಷಣವನ್ನು ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಓದಿ ಮುಗಿಸಿದ ನಂತರ ಬಜೆಟ್ ಪ್ರತಿಯನ್ನು ಎಲ್ಲ ಸದಸ್ಯರಿಗೆ ವಿತರಿಸಲು ಮುಖ್ಯಮಂತ್ರಿ ಕೋರಿದ್ದಾರೆ ಎಂದು ಸೂಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಯಡಿಯೂರಪ್ಪ ಪತ್ರದಲ್ಲಿ ತಿಳಿಸಿದ್ದಾರೆ.
Next Story





