ವಿಂಡೀಸ್ ತಂಡಕ್ಕೆ ಗೇಲ್ ವಾಪಸ್
ಸೈಂಟ್‌ಲೂಸಿಯಾ, ಫೆ.7: ಈ ವರ್ಷದ ವಿಶ್ವಕಪ್‌ಗೆ ಪೂರ್ವ ತಯಾರಿ ಎನಿಸಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಅಂತರ್‌ರಾಷ್ಟ್ರೀಯ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ ಹಿರಿಯ ದಾಂಡಿಗ ಕ್ರಿಸ್ ಗೇಲ್‌ಗೆ ಕರೆ ನೀಡಿದೆ.
ಹಾರ್ಡ್ ಹಿಟ್ಟರ್, 39ರ ಹರೆಯದ ಗೆಲ್ ಕಳೆದ ವರ್ಷದ ಜುಲೈನಲ್ಲಿ ಸ್ವದೇಶದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಕೊನೆಯ ಬಾರಿ ವಿಂಡೀಸ್ ಪರ ಆಡಿದ್ದರು. ಇದೀಗ ಎವಿನ್ ಲೂಯಿಸ್ ಜೊತೆಗೂಡಿ ತಂಡಕ್ಕೆ ಭರ್ಜರಿ ಆರಂಭ ನೀಡಲು ಸಜ್ಜಾಗಿದ್ದಾರೆ.
3 ಪಂದ್ಯಗಳ ಟೆಸ್ಟ್ ಸರಣಿ ಕೊನೆಗೊಂಡ ಬಳಿಕ ವಿಂಡೀಸ್ ಹಾಗೂ ಇಂಗ್ಲೆಂಡ್ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಮೊದಲ ಪಂದ್ಯ ಫೆ.20 ರಂದು ಬ್ರಿಡ್ಜ್‌ಟೌನ್‌ನಲ್ಲಿ ನಡೆಯಲಿದೆ.
ಗೇಲ್ ವಿಂಡೀಸ್ ಪರ ಗರಿಷ್ಠ ಶತಕಗಳನ್ನು(23) ಸಿಡಿಸಿದ ದಾಖಲೆ ಹೊಂದಿದ್ದು, 50 ಓವರ್ ಕ್ರಿಕೆಟ್ ಪಂದ್ಯದಲ್ಲಿ ಬ್ರಿಯಾನ್ ಲಾರಾ(10,405)ಬಳಿಕ ದೇಶದ ಪರ ಗರಿಷ್ಠ ಸ್ಕೋರ್ (9,727 ರನ್)ಗಳಿಸಿರುವ ಎರಡನೇ ದಾಂಡಿಗನಾಗಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಝಿಂಬಾಬ್ವೆ ವಿರುದ್ಧ ಗರಿಷ್ಠ ವೈಯಕ್ತಿಕ ಸ್ಕೋರ್(215) ಗಳಿಸಿದ್ದಾರೆ.
►ವಿಂಡೀಸ್ ತಂಡ: ಜೇಸನ್ ಹೋಲ್ಡರ್(ನಾಯಕ), ಫ್ಯಾಬಿಯನ್ ಅಲ್ಲೆನ್, ದೇವೇಂದ್ರ ಬಿಶೂ, ಡರೆನ್ ಬ್ರಾವೊ, ಕ್ರಿಸ್ ಗೇಲ್, ಶಿಮ್ರಿನ್ ಹೆಟ್ಮೆಯರ್, ಶೈ ಹೋಪ್, ಎವಿನ್ ಲೂವಿಸ್, ಅಶ್ಲೆ ನರ್ಸ್, ಕೀಮೊ ಪಾಲ್, ನಿಕೊಲಸ್ ಪೂರನ್, ಪಾವ್‌ಮನ್ ಪೊವೆಲ್, ಕೆಮರ್ ರೋಚ್, ಒಶಾನೆ ಥಾಮಸ್.







