ತನ್ನ ಪ್ರತಿಮೆಗಳಿಗೆ ಮಾಡಿದ ವೆಚ್ಚವನ್ನು ಮಾಯಾವತಿ ಮರುಪಾವತಿಸಬೇಕಾದೀತು: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಫೆ.8: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ತಮ್ಮ ಆಡಳಿತಾವಧಿಯಲ್ಲಿ ಸಾರ್ವಜನಿಕ ಹಣ ಬಳಸಿ ತಮ್ಮ ಪ್ರತಿಮೆಗಳನ್ನು ಹಲವೆಡೆ ಸ್ಥಾಪಿಸಲು ಬಳಸಿದ ಹಣವನ್ನು ವಾಪಸ್ ನೀಡಬೇಕಾದೀತು ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಶುಕ್ರವಾರ ವ್ಯಕ್ತಪಡಿಸಿದ್ಧಾರೆ.
ಸಾರ್ವಜನಿಕ ಹಣ ಬಳಸಿ ಸ್ವಂತ ಪ್ರತಿಮೆಗಳನ್ನು ನಿರ್ಮಿಸಿ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಪ್ರಚಾರ ನೀಡುವ ಹಾಗಿಲ್ಲ ಎಂದು ವಕೀಲರೊಬ್ಬರು ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆಯನ್ನು ನಡೆಸಿದ ಸಂದರ್ಭ ಮೇಲಿನ ಅಭಿಪ್ರಾಯ ವ್ಯಕ್ತವಾಗಿದೆ.
ಈ ಅಪೀಲಿನ ಮೇಲಿನ ಅಂತಿಮ ವಿಚಾರಣೆಯನ್ನು ಜಸ್ಟಿಸ್ ದೀಪಕ್ ಗುಪ್ತಾ ಮತ್ತು ಜಸ್ಟಿಸ್ ಸಂಜೀವ್ ಖನ್ನಾ ಅವರ ಪೀಠ ಎಪ್ರಿಲ್ 2ಕ್ಕೆ ನಿಗದಿ ಪಡಿಸಿದೆ.
2009ರಲ್ಲಿ ಬಿಎಸ್ ಪಿ ನಾಯಕಿ ಮಾಯಾವತಿ ತನ್ನ ಆರು ಪ್ರತಿಮೆಗಳ ಸಹಿತ 40ಕ್ಕೂ ಅಧಿಕ ಪ್ರತಿಮೆಗಳನ್ನು ರಾಜ್ಯದಲ್ಲಿ ಸ್ಥಾಪಿಸಿ ವಿವಾದಕ್ಕೀಡಾಗಿದ್ದರು. ಉತ್ತರ ಪ್ರದೇಶ ಸಂಸ್ಕೃತಿ ಇಲಾಖೆಯ 2009-2010 ಬಜೆಟ್ ಪ್ರಕಾರ 2008-2009ರಲ್ಲಿ ಮಹಾನ್ ನಾಯಕರ ಪ್ರತಿಮೆ ನಿರ್ಮಾಣಕ್ಕೆ ರೂ. 194 ಕೋಟಿ ನಿಗದಿ ಪಡಿಸಲಾಗಿತ್ತು ಹಾಗೂ ಎಲ್ಲಾ ಹಣವನ್ನೂ ಖರ್ಚು ಮಾಡಲಾಗಿದೆ ಎಂದು ಹೇಳಲಾಗಿತ್ತು.
ಪ್ರತಿಮೆಗಳನ್ನು ಸ್ಥಾಪಿಸುವ ಕಡೆ ಪಾರ್ಕ್ ಗಳ ನಿರ್ಮಾಣ ನಿಲ್ಲಿಸಬೇಕೆಂದು ಅದೇ ವರ್ಷ ಸುಪ್ರೀಂ ಕೋರ್ಟ್ ಹೇಳಿದ್ದರೂ ನಂತರ ಪಾರ್ಕ್ ನಿರ್ಮಾಣಕ್ಕೆ ಅನುಮತಿಸಲಾಗಿತ್ತಲ್ಲದೆ, ಶೇ 50ರಷ್ಟು ಸ್ಥಳದಲ್ಲಿ ಹಸಿರು ಹೊದಿಕೆ ಇರಬೇಕು ಹಾಗೂ ಉಳಿದ ಶೇ 25ರಲ್ಲಿ ಮಾತ್ರ ಖಾಯಂ ನಿರ್ಮಾಣಗಳಿರಬೇಕು ಎಂದು ಹೇಳಿತ್ತು.