ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಆಕಾಂಕ್ಷಿ: ಯು.ಕೆ.ಮೋನು

ಮಂಗಳೂರು, ಫೆ .8: ಮಂಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತಾನು ಆಕಾಂಕ್ಷಿಯಾಗಿರುವುದಾಗಿ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಯು.ಕೆ. ಮೋನು ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಲೋಕ ಸಭೆಗೆ ಸ್ಪರ್ಧಿಸಲು ಈ ಹಿಂದೆ ಎರಡು ಬಾರಿ ಕಾಂಗ್ರೆಸ್‌ನಿಂದ ಅವಕಾಶ ಕೋರಿದ್ದೆ. ಈ ಬಾರಿಯಾದರೂ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸುವುದಾಗಿ ಕಣಚೂರು ಮೋನು ತಿಳಿಸಿದ್ದಾರೆ.
1970ರಿಂದಲೂ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯನಾಗಿದ್ದು, ಪಕ್ಷದ ಅಭಿವೃದ್ಧಿಗಾಗಿ ದುಡಿದಿದ್ದೇನೆ. ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಸಮಿತಿಯ ಅಧ್ಯಕ್ಷನಾಗಿ, ಕೆಪಿಸಿಸಿ ಸದಸ್ಯನಾಗಿ ಮತ್ತು ಕೆಪಿಸಿಸಿ ಅಲ್ಪ ಸಂಖ್ಯಾತ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷನಾಗಿ ರಾಜ್ಯಾದ್ಯಂತ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಹಿನ್ನೆಲೆಯಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ನನಗೆ ಕಾಂಗ್ರೆಸ್ ಪಕ್ಷದಿಂದ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ ಮಾಡಿದ್ದು, ಅವಕಾಶ ನೀಡುತ್ತಾರೆ ಎನ್ನುವ ವಿಶ್ವಾಸ ಹೊಂದಿರುವುದಾಗಿ ಯು.ಕೆ. ಕಣಚೂರು ಮೋನು ತಿಳಿಸಿದ್ದಾರೆ.
ಕೆಪಿಸಿಸಿ ವೀಕ್ಷಕರು ಜಿಲ್ಲೆಗೆ
ಲೋಕ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಕೆಪಿಸಿಸಿ ವೀಕ್ಷಕರು ಫೆ.9ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಅವರಿಗೂ ಮನವಿ ಸಲ್ಲಿಸುವುದಾಗಿ ಕಣಚೂರು ಮೋನು ತಿಳಿಸಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುವುದಾಗಿ ಕಣಚೂರು ಮೋನು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಟಿ.ಎಮ್. ಶಹೀದ್, ಕೆಪಿಸಿಸಿ ಅಲ್ಪ ಸಂಖ್ಯಾತರ ಸಮಿತಿಯ ರಾಜ್ಯ ಸಂಯೋಜಕ ನೂರುದ್ದೀನ್ ಸಾಲ್ಮರ, ಉಸ್ಮಾನ್ ಕಲ್ಲಾಪು, ಹುಸೈನ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.








