ಕಲ್ಕುಳಿ ವಿಠಲ್ ಹೆಗ್ಡೆ, ಕಡಿದಾಳ್ ಶಾಮಣ್ಣರಿಗೆ ನಕ್ಸಲರೊಂದಿಗೆ ನಂಟು ಎಂಬ ವರದಿ ಪ್ರಕಟ: ಸಂಪಾದಕರಿಬ್ಬರಿಗೆ ದಂಡ

ಕಲ್ಕುಳಿ ವಿಠಲ್ ಹೆಗ್ಡೆ, ಕಡಿದಾಳ್ ಶಾಮಣ್ಣ
ಚಿಕ್ಕಮಗಳೂರು, ಫೆ.8: ನಾಡಿನ ಹೆಸರಾಂತ ರೈತ, ಪರಿಸರ ಹೋರಾಟಗಾರರು ಹಾಗೂ ಪ್ರಗತಿಪರ ಚಿಂತಕರಾದ ಕಲ್ಕುಳಿ ವಿಠಲ್ ಹೆಗ್ಡೆ ಹಾಗೂ ಕಡಿದಾಳ್ ಶಾಮಣ್ಣ ಅವರಿಗೆ ನಕ್ಸಲರೊಂದಿಗೆ ನಂಟಿದೆ ಎಂಬರ್ಥದಲ್ಲಿ ದಿನಪತ್ರಿಕೆಯೊಂದರ ಮುಖಪುಟದಲ್ಲಿ ಮಾನ ಹಾನಿಕರ ಸುದ್ದಿ ಪ್ರಕಟಿಸಿದ ಆರೋಪದ ಮೇರೆಗೆ ಪತ್ರಿಕೆಯ ಸಂಪಾದಕ ಹಾಗೂ ಸ್ಥಾನಿಕ ಸಂಪಾದಕರಿಬ್ಬರಿಗೆ ಶೃಂಗೇರಿ ಪ್ರಥಮ ದರ್ಜೆ ನ್ಯಾಯಾಲಯ ತಲಾ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
11 ವರ್ಷಗಳ ಹಿಂದೆ 2007 ಜೂ.3ರಂದು ರಾಜ್ಯಮಟ್ಟದ ದಿನಪತ್ರಿಕೆಯೊಂದರ (ಹೊಸದಿಗಂತ ದಿನಪತ್ರಿಕೆಯ) ಮುಖಪುಟದಲ್ಲಿ ಶೃಂಗೇರಿಯ ಪರಿಸರ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ ಹಾಗೂ ಶಿವಮೊಗ್ಗ ಜಿಲ್ಲೆಯ ಹೆಸರಾಂತ ರೈತ ಚಳವಳಿ ಮುಖಂಡ ಕಡಿದಾಳ್ ಶಾಮಣ್ಣ ಅವರಿಗೆ ನಕ್ಸಲ್ ನಂಟಿದೆ ಎಂದು ಆರೋಪಿಸಿ, "ಕಲ್ಕುಳಿ ವಿಠಲ್ ಹೆಗ್ಡೆ, ಕಡಿದಾಳ್ ಶಾಮಣ್ಣರಿಗೆ ನಕ್ಸಲ್ ನಂಟು; ಇಲ್ಲಿದೆ ಪುರಾವೆ" ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರ ಸಹಿತ ಸುದ್ದಿ ಪ್ರಕಟಿಸಿತ್ತು ಎಂದು ತಿಳಿದು ಬಂದಿದೆ.
ಈ ವರದಿಯ ವಿರುದ್ಧ ಕಲ್ಕುಳಿ ವಿಠಲ್ ಹೆಗ್ಡೆ ಅವರು ಶೃಂಗೇರಿಯ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಮಾನಹಾನಿ ಮೊಕದ್ದಮೆ ದಾಖಲಿಸಿ, ಅದು ಸುಳ್ಳು ಸುದ್ದಿಯಾಗಿದ್ದು, ಇದರಿಂದ ತಮ್ಮ ಚಾರಿತ್ರ್ಯವಧೆ ಹಾಗೂ ತಮ್ಮನ್ನು ಅವಮಾನ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರೆಂದು ತಿಳಿದು ಬಂದಿದೆ.
ಈ ಮೊಕದ್ದಮೆಯ ಸುದೀರ್ಘ ವಿಚಾರಣೆಯು ಶೃಂಗೇರಿ ನ್ಯಾಯಾಲಯದಲ್ಲಿ ನಡೆದಿದ್ದು, ದಿನಪತ್ರಿಕೆಯ ಸಂಪಾದಕರು ಸುದ್ದಿಯ ಸತ್ಯಾಸತ್ಯತೆಯನ್ನು ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆಂಬ ಅಂಶ ಉಲ್ಲೇಖಿಸಿ ನ್ಯಾಯಾಧೀಶ ಎಸ್. ಸೂರ್ಯ ನಾರಾಯಣ ಅವರು 2019, ಜ.25 ರಂದು ತೀರ್ಪು ಪ್ರಕಟಿಸಿದ್ದು, ಮಾನಹಾನಿಕರ ಸುದ್ದಿ ಪ್ರಕಟಿಸಿದ ಆರೋಪ ಮೇರೆಗೆ ಐಪಿಸಿ ಸೆಕ್ಷನ್ 500, 501, 502ರ ಅಡಿಯಲ್ಲಿ ಪತ್ರಿಕೆಯ ಸಂಪಾದಕರಾದ ದು.ಗ.ಲಕ್ಷ್ಮಣ್ ಹಾಗೂ ಸ್ಥಾನಿಕ ಸಂಪಾದಕ ಎಸ್.ಶಾಂತರಾಮ ಅವರು ಶಿಕ್ಷಾರ್ಹ ಅಪರಾಧ ಮಾಡಿದ್ದಾರೆಂದು ನ್ಯಾಯಾಲಯ ಅಭಿಪ್ರಾಯಿಸಿದೆ.
ಈ ಪ್ರಕರಣಕ್ಕಾಗಿ ನ್ಯಾಯಾಲಯ ದಿನಪತ್ರಿಕೆಯ ಸಂಪಾದಕ ಹಾಗೂ ಸ್ಥಾನಿಕ ಸಂಪಾದಕರಿಬ್ಬರಿಗೆ ತಲಾ 20 ಸಾವಿರ ರೂ. ತಂಡ ವಿಧಿಸಿದ್ದು, ಈ ದಂಡವನ್ನು ಪಾವತಿಸುವಲ್ಲಿ ಆರೋಪಿಗಳು ವಿಫಲವಾದಲ್ಲಿ 7 ತಿಂಗಳ ಸೆರೆಮನೆ ವಾಸದ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿ ಆದೇಶಿಸಿದೆ. ಅಲ್ಲದೇ ದಿನಪತ್ರಿಕೆಯಲ್ಲಿ ಪ್ರಕಟವಾದ ಭಾವಚಿತ್ರವನ್ನು 1998ರಲ್ಲಿ ತೆಗೆಯಲಾಗಿದ್ದು, ಈ ಅವಧಿಯಲ್ಲಿ ಮಲೆನಾಡಿನಲ್ಲಿ ನಕ್ಸಲ್ ಚಳವಳಿಯೇ ಇರಲಿಲ್ಲ. ಈ ಭಾವಚಿತ್ರವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂಬಂಧ ಜನಜಾಗೃತಿ ಸಭೆಗಳನ್ನು ನಡೆಸುತ್ತಿದ್ದ ವೇಳೆ ತೆಗೆಯಲಾಗಿದೆ. ಭಾವಚಿತ್ರದಲ್ಲಿದ್ದ ವಿಠಲ್ ಹೆಗ್ಡೆ ಹಾಗೂ ಶಾಮಣ್ಣ ಅವರೊಂದಿಗಿದ್ದ ಪಾರ್ವತಿ ಎಂಬವರು ಆಗಿನ್ನೂ ನಕ್ಸಲ್ ಚಳವಳಿಯಲ್ಲಿ ಭಾಗಿಯಾಗಿರಲಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.







