ಆಳಸಮುದ್ರದಲ್ಲಿ ಕಂಡುಬಂದದ್ದು ಬೋಟಲ್ಲ, ಕಲ್ಲುಬಂಡೆ: ಎಸ್ಪಿ
ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣ
ಉಡುಪಿ, ಫೆ.8: ಮಲ್ಪೆಯ ಸುವರ್ಣ ತ್ರಿಭುಜ ಬೋಟು ಸಹಿತ ಏಳು ಮಂದಿ ಮೀನುಗಾರರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶೋಧ ಕಾರ್ಯ ನಡೆಸುತ್ತಿರುವ ನೌಕಪಡೆಯ ಸೋನಾರ್ ಉಪಕರಣಕ್ಕೆ ಆಳ ಸಮುದ್ರದಲ್ಲಿ ಕಂಡುಬಂದಿರುವುದು ಬೋಟು ಅಲ್ಲ. ಅದು ಸಮುದ್ರದ ಆಳದಲ್ಲಿರುವ ಕಲ್ಲು ಬಂಡೆಯಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಮಾಲ್ವನ್ ಆಳ ಸಮುದ್ರದಲ್ಲಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟಿಗೆ ನೌಕಪಡೆಯ ಹಡಗು ಢಿಕ್ಕಿ ಹೊಡೆದಿರಬಹು ದಾದ ಶಂಕೆಯಲ್ಲಿ ನೌಕಪಡೆಯು ಸೋನಾರ್ ತಂತ್ರಜ್ಞಾನದ ಮೂಲಕ ಹುಡು ಕಾಟ ನಡೆಸುತ್ತಿತ್ತು. ಈ ವೇಳೆ ಸಮುದ್ರದ ಆಳದಲ್ಲಿ ಸುಮಾರು 21-22 ಮೀಟರ್ ಉದ್ದದ ಬೋಟಿನ ಮಾದರಿಯ ವಸ್ತುವೊಂದು ಕಂಡುಬಂದಿತ್ತು. ಅದಕ್ಕಾಗಿ ಮುಳುಗು ತಜ್ಞರನ್ನು ಹಾಗೂ ಇತರ ತಂತ್ರಜ್ಞಾನ ಬಳಸಿ ಪರಿಶೀಲನೆ ಕಾರ್ಯ ನಡೆಸಲಾಗಿತ್ತು.
ಇದೀಗ ಸಮುದ್ರದ ಆಳದಲ್ಲಿ ಕಂಡುಬಂದಿರುವುದು ಬೋಟು ಅಲ್ಲ, ಕಲ್ಲು ಬಂಡೆ ಎಂಬುದು ಖಚಿತ ಪಡಿಸಲಾಗಿದೆ. ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟು 23 ಮೀಟರ್ ಉದ್ದ ಇದೆ ಎಂದು ಹೇಳಲಾಗುತ್ತಿದೆ. ನೌಕ ಪಡೆ ಮತ್ತೆ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದು ಇದಕ್ಕಾಗಿ ಹೊಸ ತಂತ್ರಜ್ಞಾನಗಳೊಂದಿಗೆ ನಿರೀಕ್ಷಕ್ ಎಂಬ ಹಡಗನ್ನು ಬಳಸಲಾಗುತ್ತಿದೆ ಎಂದು ಎಸ್ಪಿ ಹೇಳಿದರು.
ಇತ್ತೀಚೆಗೆ ಮಾಲ್ವನ್ ಸಮುದ್ರದಲ್ಲಿ ಸಿಕ್ಕಿದ ಬೋಟೊಂದರ ಕ್ಯಾಬಿನ್, ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನದ್ದಲ್ಲ ಎಂಬುದಾಗಿ ಮಲ್ಪೆ ಮೀನು ಗಾರರು ಸ್ಪಷ್ಟಪಡಿಸಿದ್ದರು. ಆದರೂ ಮಲ್ಪೆ ಕರಾವಳಿ ಕಾವಲು ಪಡೆಯ ಎಸ್ಪಿ ಪ್ರಮೋದ್ ನೇತೃತ್ವ ತಂಡ ಮುಂಬೈಗೆ ತೆರಳಿ ಈ ಕುರಿತು ಪರಿಶೀಲನೆ ನಡೆಸಲಿದೆ ಎಂದು ಅವರು ತಿಳಿಸಿದರು.
ಭಾವನೆ ಜೊತೆ ಆಡಬೇಡಿ
ನಾಪತ್ತೆಯಾದ ಬೋಟು ಹಾಗೂ ಮೀನುಗಾರರಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ಹರಡುವ ಮೂಲಕ ನಾಪತ್ತೆಯಾದ ಕುಟುಂಬದವರ ಭಾವನೆಯ ಜೊತೆ ಆಟ ಆಡಬೇಡಿ ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಮನವಿ ಮಾಡಿಕೊಂಡರು.







