ಫೆ.11ರಂದು ಹೊಸ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ
ಹರೇನ್ ಪಾಂಡ್ಯ ಹತ್ಯೆ ಪ್ರಕರಣ

ಹೊಸದಿಲ್ಲಿ,ಫೆ.8: ಗುಜರಾತ್ ನ ಮಾಜಿ ಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣದಲ್ಲಿ ವಿಚಾರಣೆಯ ಬಳಿಕ ಕೆಲವು ಹೊಸ ಅಂಶಗಳು ಬೆಳಕಿಗೆ ಬಂದಿರುವುದರಿಂದ ಮರುತನಿಖೆಯನ್ನು ಕೋರಿ ಎನ್‌ಜಿಒ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್(ಸಿಪಿಐಎಲ್) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಫೆ.11ರಂದು ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಿಳಿಸಿತು.
ಈ ಪ್ರಕರಣದಲ್ಲಿ ಮೇಲ್ಮನವಿಯೊಂದರ ವಿಚಾರಣೆಯನ್ನು ಬೇರೆ ಪೀಠವು ಈಗಾಗಲೇ ನಡೆಸಿದೆ. ಹೀಗಾಗಿ ಈ ಅರ್ಜಿಯ ವಿಚಾರಣೆಯನ್ನೂ ಅದೇ ಪೀಠವು ನಡೆಸುವುದು ಸೂಕ್ತವಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿ ಗಳಾದ ಎ.ಕೆ.ಸಿಕ್ರಿ ಮತ್ತು ಎಸ್.ಅಬ್ದುಲ್ ನಝೀರ್ ಅವರ ಪೀಠವು,ವಿಚಾರಣೆಯನ್ನು ಫೆ.11ಕ್ಕೆ ನಿಗದಿಗೊಳಿಸಿತು.
ಜ.31ರಂದು ನ್ಯಾ.ಅರುಣ ಮಿಶ್ರಾ ನೇತೃತ್ವದ ಪೀಠವು,ಪ್ರಕರಣದಲ್ಲಿಯ ಎಲ್ಲ ಆರೋಪಿಗಳನ್ನು ಬಿಡುಗಡೆ ಗೊಳಿಸಿರುವ ಗುಜರಾತ್ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಸಿಪಿಐಎಲ್ ಪರ ವಕೀಲ ಪ್ರಶಾಂತ ಭೂಷಣ್ ಅವರು,ಪ್ರಕರಣದಲ್ಲಿ ವಿಚಾರಣೆ ಮುಗಿದ ನಂತರ ಹೊಸದಾಗಿ ನಾಲ್ಕು ಅಂಶಗಳು ಬೆಳಕಿಗೆ ಬಂದಿವೆ ಮತ್ತು ಮರುತನಿಖೆಗೆ ಆದೇಶಿಸುವ ಅಗತ್ಯವಿದೆ ಎಂದು ಹೇಳಿದರು.