ಗುಡ್ ಸಮರಿಟನ್ ಕಾನೂನಿನ ಬಗ್ಗೆ ಶೇ.84ರಷ್ಟು ಜನರಿಗೆ ಅರಿವಿಲ್ಲ: ವರದಿ

ಮುಂಬೈ,ಫೆ.8: ರಸ್ತೆ ಅಪಘಾತಗಳಲ್ಲಿ ಸಿಲುಕಿದವರಿಗೆ ನೆರವಾಗುವ ಪರೋಪಕಾರಿಗಳಿಗೆ ರಕ್ಷಣೆಯನ್ನು ಒದಗಿಸುವ ಗುಡ್ ಸಮರಿಟನ್ ಕಾನೂನಿನ ಬಗ್ಗೆ ಶೇ.84ರಷ್ಟು ಜನರಿಗೆ ಅರಿವಿಲ್ಲ ಎಂದು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಎನ್‌ಜಿಒ ಸೇವ್‌ಲೈಫ್ ಫೌಂಡೇಷನ್ ನಡೆಸಿರುವ ಸಮೀಕ್ಷೆಯು ಬೆಳಕಿಗೆ ತಂದಿದೆ.
ದಿಲ್ಲಿ,ಜೈಪುರ,ಕಾನ್ಪುರ,ವಾರಣಾಸಿ,ಲುಧಿಯಾನಾ,ಬೆಂಗಳೂರು,ಹೈದರಾಬಾದ್,ಚೆನ್ನೈ,ಮುಂಬೈ,ಇಂದೋರ ಮತ್ತು ಕೋಲ್ಕತಾ ಈ 11 ನಗರಗಳಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ ಪೊಲೀಸರು,ಆಸ್ಪತ್ರೆಗಳ ಆಡಳಿತ,ವೈದ್ಯರು ಮತ್ತು ವಿಚಾರಣಾ ನ್ಯಾಯಾಲಯಗಳ ವಕೀಲರು ಸೇರಿದಂತೆ 3,667 ಜನರಿಗೆ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಸೇವ್‌ಲೈಫ್ ಹೇಳಿಕೆಯಲ್ಲಿ ತಿಳಿಸಿದೆ.
ಅಪಘಾತ ಸಂದರ್ಭಗಳಲ್ಲಿ ಗಾಯಾಳುಗಳಿಗೆ ನೆರವಾಗುವ ಉಪಕಾರಿಗಳಿಗೆ ರಕ್ಷಣೆಯನ್ನು ಒದಗಿಸಲು ಕಾನೂನು ರಚನೆಗಾಗಿ ಆಗ್ರಹಿಸಿ ಸೇವ್‌ಲೈಫ್ ಈ ಹಿಂದೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲಿಸಿತ್ತು. ಇದು 2016ರಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಈ ಸಂಬಂಧ ಮಾರ್ಗಸೂಚಿಗಳನ್ನು ಹೊರಡಿಸಲು ಕಾರಣವಾಗಿತ್ತು.
2018ರ ಅಂತ್ಯದಲ್ಲಿ ನಡೆಸಲಾಗಿದ್ದ ಸಮೀಕ್ಷೆಯು ಪ್ರಶ್ನೆಗಳಿಗೆ ಉತರಿಸಿದ್ದ ಮುಂಬಯಿಗರಲ್ಲಿ ಶೇ.78ರಷ್ಟು ಜನರಿಗೆ ಗುಡ್ ಸಮರಿಟನ್ ಮಾರ್ಗಸೂಚಿಗಳ ಬಗ್ಗೆ ತಿಳಿದಿಲ್ಲ ಎನ್ನುವುದನ್ನು ಬೆಟ್ಟು ಮಾಡಿದೆ.







