ಫೆ.13ರಂದು ಬೆಂಗಳೂರಿನಲ್ಲಿ ವೈಚಾರಿಕ ಸಮಾವೇಶ: ರವಿಕಿರಣ್ ಪುಣಚ

ಬಂಟ್ವಾಳ, ಫೆ. 8: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ವಿಶ್ವ ರೈತ ಚೇತನ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ ನೆನಪಿನ ದಿನಾಚರಣೆ ಅಂಗವಾಗಿ ಫೆ.13ರಂದು ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ವೈಚಾರಿಕ ಸಮಾವೇಶ ನಡೆಯಲಿದೆ. ಅಲ್ಲದೆ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಕಂಚಿನ ಪುತ್ಥಳಿಯನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ಕ್ಯಾತನಹಳ್ಳಿಯಲ್ಲಿ ಫೆ.18ರಂದು ಲೋಕಾರ್ಪಣೆಗೊಳಿಸಲಾಗುತ್ತದೆ. ಎರಡೂ ಕಾರ್ಯಕ್ರಮಗಳಿಗೆ ದ.ಕ.ಜಿಲ್ಲೆಯಿಂದ ಸುಮಾರು 1 ಸಾವಿರ ರೈತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ರೈತಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ಬಂಟ್ವಾಳದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಬಜೆಟ್ ಅನ್ನು ಕಟುವಾಗಿ ಟೀಕಿಸಿ, ರೈತರನ್ನು ಭಿಕ್ಷುಕರು ಎಂಬಂತೆ ಕೇಂದ್ರ ತಿಳಿದಿದೆ. ತಿಂಗಳಿಗೆ 500 ರೂ. ನೀಡುವ ಘೋಷಣೆ ಮಾಡುವುದರ ಮೂಲಕ ಪ್ರಧಾನಿ ಮೋದಿ ಅವಮಾನ ಮಾಡಿದ್ದಾರೆ ಎಂದರು.
ರಾಜ್ಯ ಸರಕಾರದ ಬಜೆಟ್ ರೈತರ ಹಿತದೃಷ್ಟಿಯಿಂದ ಚೆನ್ನಾಗಿದೆ ಎಂದು ಶ್ಲಾಘಿಸಿದ ಅವರು, ರೈತರಿಗೆ ಕೆಲವೊಂದು ಅನುಕೂಲಕರ ವಾತಾವರಣ ಕಲ್ಪಿಸಲಾಗಿದೆ ಎಂದರು.
ಅಡಕೆ ಬೆಳೆಗಾರರಿಗೆ ನ್ಯಾಯೋಚಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ದ.ಕ.ಜಿಲ್ಲೆಯ ಶಾಸಕರು ಯಾವುದೇ ಪ್ರಯತ್ನ ನಡೆಸಿಲ್ಲ, ಅಂಕಿ ಅಂಶ ನೀಡಲೂ ಸೋತಿದ್ದಾರೆ ಎಂದು ಆರೋಪಿಸಿದ ಅವರು, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಜಿಲ್ಲೆಯ ಶಾಸಕರ ಬೆಂಬಲ ಏನೇನೂ ಸಾಲದು ಎಂದರು.
ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟದಲ್ಲಿ ನಾವಿದ್ದೇವೆ, ದ.ಕ.ಜಿಲ್ಲೆಯ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಸಾದ್ ಶೆಟ್ಟಿ ಪೆರಾಬೆ, ಸತೀಶ್ಚಂದ್ರ ರೈ, ದಿವಾಕರ ಪೂಜಾರಿ, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಪ್ರೇಮನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.







