ಜಂತುಹುಳದ ಕುರಿತಂತೆ ಪೋಷಕರಿಗೆ ಜಾಗೃತಿ ಅಗತ್ಯ: ದಿನಕರಬಾಬು

ಉಡುಪಿ, ಫೆ.8: ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಪೋಷಕರಿಗೆ ಜಂತುಹುಳದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಜಂತುಹುಳ ಜಾಗೃತಿ ಕಾರ್ಯಕ್ರಮಗಳನ್ನು ಕೇವಲ ಸರಕಾರಿ ಶಾಲೆಗಳಿಗೆ ಸೀಮಿತ ಗೊಳಿಸದೇ ಎಲ್ಲಾ ಶಾಲೆಗಳಲ್ಲಿ ನಡೆಯಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.
ಶುಕ್ರವಾರ ಉಡುಪಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ನಗರದ ಹನುಮಂತನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಠಿಕತೆ ಹಾಗೂ ರಕ್ತಹೀನತೆಯನ್ನು ತಡೆಗಟ್ಟಲು ಇಂಥ ಕಾರ್ಯಕ್ರಮಗಳು ಪೂರಕ. ಜಂತು ಹುಳಗಳ ನಿವಾರಣೆ ಆರೋಗ್ಯವಂತ ಮಕ್ಕಳ ಬೆಳವಣಿಗೆಗೆ ಅಗತ್ಯವಾಗಿದ್ದು, ಪೋಷಕರು ಈ ನಿಟ್ಟಿನಲ್ಲಿ ಜಾಗೃತೆ ವಹಿಸಬೇಕು ಎಂದರು.
ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಠಿಕತೆ ಹಾಗೂ ರಕ್ತಹೀನತೆಯನ್ನು ತಡೆಗಟ್ಟಲು ಇಂಥ ಕಾರ್ಯಕ್ರಮಗಳು ಪೂರಕ. ಜಂತು ಹುಳಗಳ ನಿವಾರಣೆ ಆರೋಗ್ಯವಂತ ಮಕ್ಕಳ ಬೆಳವಣಿಗೆಗೆ ಅಗತ್ಯವಾಗಿದ್ದು, ಪೋಷಕರು ಈ ನಿಟ್ಟಿನಲ್ಲಿ ಜಾಗೃತೆ ವಹಿಸಬೇಕು ಎಂದರು. ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಜಂತುಹುಳಗಳು ಪರೋಪಜೀವಿಗಳಾಗಿರುವುದರಿಂದ ಮನುಷ್ಯನ ದೇಹದಲ್ಲಿರುವ ಪೌಷ್ಟಿಕಾಂಶ ಗಳನ್ನು ಹೀರಿ, ಅಪೌಷ್ಠಿಕತೆಯೊಂದಿಗೆ, ರಕ್ತಹೀನತೆಗೂ ಕಾರಣವಾಗುತ್ತವೆ. ಇದರಿಂದ ಮಕ್ಕಳ ದೇಹದಲ್ಲಿ ರೋಗ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದು ಮಕ್ಕಳ ಬೆಳವಣಿಗೆ ಹಾಗೂ ಕಲಿಯುವ ಆಸಕ್ತಿಯನ್ನು ಕುಂಠಿತ ಗೊಳಿಸುತ್ತದೆ ಎಂದರು.
ಹೀಗಾಗಿ ಮಕ್ಕಳ ಆರೋಗ್ಯದ ದೃಷ್ಠಿಯಿಂದ ವರ್ಷದಲ್ಲಿ ಎರಡು ಬಾರಿ -ಫೆಬ್ರವರಿ ಹಾಗೂ ಜುಲೈ ತಿಂಗಳುಗಳಲ್ಲಿ- 1ರಿಂದ 19ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಜಂತುಹುಳ ಮಾತ್ರೆಯನ್ನು ನೀಡಲಾಗುತ್ತದೆ. ಇದನ್ನು ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಗಳಲ್ಲಿ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಜಂತುಹುಳ ನಿವಾರಣಾ ಮಾತ್ರೆಯನ್ನು ವಿತರಿಸಲಾಯಿತು. ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದಬೆಟ್ಟು, ನಗರಸಭಾ ಸದಸ್ಯ ಸಂತೋಷ ಜತ್ತನ್ನ, ಸರ್ವಶಿಕ್ಷಣ ಅಭಿಯಾನದ ಅಧಿಕಾರಿ ಪ್ರಭಾಕರ ಮಿತ್ಯಂತಾಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಮಿತ್ ಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ.ನಾಗರತ್ನ, ರೋಟರಿ ಕ್ಲಬ್ ಕಾರ್ಯದರ್ಶಿ ಜನಾರ್ದನ್ ಭಟ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾಮ, ಶಾಲೆಯ ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಉಪಸ್ಥಿತರಿದ್ದರು.








