ಹಿರಿಯ ನಾಗರಿಕರಿಂದ ಹೆಚ್ಚು ದರ ವಸೂಲು ಮಾಡಿದರೆ ಕ್ರಮ: ವಿದ್ಯಾ ಕುಮಾರಿ ಎಚ್ಚರಿಕೆ

ಉಡುಪಿ, ಫೆ. 8: ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡುವ ಕುರಿತಂತೆ ಸರಕಾರ ನಿಗದಿಪಡಿಸಿರುವ ದರ ಹೊರತುಪಡಿಸಿ ಹೆಚ್ಚಿನ ದರ ವಸೂಲಿ ಮಾಡಿದಲ್ಲಿ ಸಂಬಂದಪಟ್ಟವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಮಣಿಪಾಲದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ವತಿಯಿಂದ ಪಾಲಕರ, ಪೋಷಕರ ಸಂರಕ್ಷಣೆ ಮತ್ತು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಅನುಷ್ಠಾನ ಗೊಳ್ಳುತ್ತಿರುವ ವಿವಿಧ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಹಾಗೂ ವಿವಿಧ ಇಲಾಖೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಇರುವ ಯೋಜನೆಗಳು ಮತ್ತು ಹಿರಿಯ ನಾಗರಿಕರ ಗುರುತು ಚೀಟಿಯನ್ನು ಆನ್‌ಲೈನ್ ಮೂಲಕ ಪಡೆಯುವ ವಿಧಾನದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತಿದ್ದರು.
ಹಿರಿಯ ನಾಗರಿಕರಿಗೆ ಸೇವಾ ಸಿಂಧು ಯೋಜನೆಯಲ್ಲಿ ಆನ್‌ಲೈನ್ ಮೂಲಕ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಸೇವಾ ಸಿಂಧು ಸೇವೆಗಳ ಸೌಲಭ್ಯ ಒದಗಿಸುತ್ತಿರುವ ಪ್ರಾಂಚೈಸಿಗಳು, ಸರಕಾರ ನಿಗದಿಪಡಿಸಿರುವ ದರಕ್ಕಿಂತ ಅಧಿಕ ದರ ಪಡೆಯುತ್ತಿರುವ ಬಗ್ಗೆ ಸಭೆಯಲ್ಲಿದ್ದ ಹಿರಿಯ ನಾಗರಿಕರು ದೂರು ನೀಡಿದ ಹಿನ್ನಲೆಯಲ್ಲಿ, ಹೆಚ್ಚಿನ ದರ ಪಡೆಯುತ್ತಿರುವವರ ವಿರುದ್ದ ಸಾಕ್ಷ್ಯಾಧಾರ ನೀಡಿ ದ್ದಲ್ಲಿ ಅಂತಹ ಪ್ರಾಂಚೈಸಿಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸು ವುದಲ್ಲದೇ, ಪ್ರಾಂಚೈಸಿ ರದ್ದುಗೊಳಿಸಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಆರಂಭಿಸುವ ಬಗ್ಗೆ, ಹಿರಿಯ ನ್ಯಾಯಮಂಡಳಿಯಲ್ಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಪಡಿಸುವ ಬಗ್ಗೆ, ಉಡುಪಿಯಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು ಉಡುಪಿ ಪೊಲೀಸ್ ಅಧೀಕ್ಷಕರ ಕಚೇರಿಗೆ ಸ್ಥಳಾಂತರಿಸುವ ಬಗ್ಗೆ, ಜಿಲ್ಲಾ ಮಟ್ಟದ ಹಿರಿಯ ನಾಗರಿಕರ ಸಮಿತಿಗೆ ಸದಸ್ಯರನ್ನು ನೇಮಕ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಎಲ್ಲಾ ಇಲಾಖೆಗಳಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಶೀಘ್ರದಲ್ಲಿ ಅವರ ಕೆಲಸಗಳನ್ನು ಮಾಡಿಕೊಡುವಂತೆ ಸೂಚಿಸಿದ ವಿದ್ಯಾಕುಮಾರಿ, ಬಸ್ ಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲಾದ ಸೀಟುಗಳನ್ನು ಕಡ್ಡಾಯವಾಗಿ ಅವರಿಗೆ ಬಿಟ್ಟು ಕೊಡುವ ಬಗ್ಗೆ ಎಲ್ಲಾ ಖಾಸಗಿ ಬಸ್ ಮಾಲಕರಿಗೆ ಹಾಗೂ ಕೆಎಸ್ಸಾರ್ಟಿಸಿಗೆ ಸೂಚಿಸುವಂತೆ ಆರ್‌ಟಿಓಗೆ ತಿಳಿಸಿದರು.
ಸಭೆಯಲ್ಲಿ ಹಿರಿಯ ನಾಗರಿಕರ ಯೋಗಕ್ಷೇಮ ಪ್ರಾಧಿಕಾರಿ ಹಾಗೂ ಕುಂದಾಪುರ ಉಪವಿಬಾಗಾಧಿಕಾರಿ ಮಧುಕೇಶ್ವರ್, ಹಿರಿಯ ನಾಗರಿಕರ ಆಸ್ತಿ ಯನ್ನು ಲಪಟಾಯಿಸುವವರಿಂದ ಮರಳಿ ಆಸ್ತಿಯನ್ನು ದೊರಕಿಸಿಕೊಡುವ ಬಗ್ಗೆ ಮತ್ತು ಖಾತೆಯನ್ನು ಬದಲಾಯಿಸಿದ್ದರೆ ಅದನ್ನು ರದ್ದುಗೊಳಿಸಿ ಪುನಃ ಹಿರಿಯ ನಾಗರಿಕರ ಹೆಸರಿಗೆ ಮಾಡುವ ಬಗ್ಗೆ ವಿವರಿಸಿದರು.
ಬಳಿಕ ವಿವಿಧ ಇಲಾಖೆಗಳಲ್ಲಿ ಹಿರಿಯ ನಾಗರಿಕರಿಗೆ ಲಭ್ಯವಿರುವ ಸೇವೆಗಳ ಕುರಿತು ಆಯಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಹಿರಿಯ ನಾಗರಿಕರು ಮನೆಯಲ್ಲಿ ಕುಳಿತು ಸೇವಾ ಸಿಂದು ಯೋಜನೆ ಮೂಲಕ ಗುರುತು ಚೀಟಿ ಪಡೆಯು ಕುರಿತು ಪ್ರಮೋದ್ ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಉಪಸ್ಥಿತರಿದ್ದರು. ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಸ್ವಾಗತಿಸಿ, ವಂದಿಸಿದರು.







