ಕೇವಲ 1.5 ಲಕ್ಷ ಜನರಿಂದ 1 ಕೋಟಿ ರೂ.ಗಿಂತ ಅಧಿಕ ಆದಾಯ ಘೋಷಣೆ

ಹೊಸದಿಲ್ಲಿ, ಫೆ.8: 2018-19ರ ಕಂದಾಯ ವರ್ಷದಲ್ಲಿ ಕೇವಲ 1.5 ಲಕ್ಷದಷ್ಟು ಮಂದಿ ಮಾತ್ರ ತಮ್ಮ ವಾರ್ಷಿಕ ಆದಾಯ 1 ಕೋಟಿ ರೂ.ಗಿಂತ ಹೆಚ್ಚು ಎಂದು ಘೋಷಿಸಿದ್ದು, ಭಾರತದಂತಹ ವಿಸ್ತೃತ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗೆ ಹೋಲಿಸಿದರೆ ಈ ಪ್ರಮಾಣ ಅತ್ಯಂತ ಕಡಿಮೆಯಾಗಿದೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ(ಸಿಬಿಡಿಟಿ)ಯ ಅಧ್ಯಕ್ಷ ಸುಶೀಲ್‌ಚಂದ್ರ ತಿಳಿಸಿದ್ದಾರೆ.
‘ಅಸೋಚಮ್’ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಳಕೆ ಮಾಹಿತಿಯ ವಿಶ್ಲೇಷಣೆ ಮಾಡುವ ಮೂಲಕ ಇಲಾಖೆಯು ಅಘೋಷಿತ ಆದಾಯವನ್ನು ಗುರುತಿಸಲು ತನಿಖೆ ನಡೆಸುತ್ತಿದೆ ಎಂದರು. 1 ಕೋಟಿ ರೂ.ಗೂ ಹೆಚ್ಚಿನ ಆದಾಯ ಘೋಷಿಸಿದವರಲ್ಲಿ ಹೆಚ್ಚಿನವರು ವೇತನ ಪಡೆಯುವ ಉದ್ಯೋಗಿಗಳಾಗಿದ್ದಾರೆ. ಆದರೆ ಹಲವು ಸಂಸ್ಥೆಗಳು ಹಾಗೂ ಸಂಘಟನೆಗಳು 1 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಘೋಷಿಸಿಲ್ಲ. ದೇಶದ ಅರ್ಥವ್ಯವಸ್ಥೆಯಲ್ಲಿ ದಾಖಲಾಗಿರುವ ಖರ್ಚಿನ ಸ್ವರೂಪಕ್ಕೆ ಈ ವಿವರ ಹೋಲಿಕೆಯಾಗುತ್ತಿಲ್ಲ ಎಂದರು.
2018ರ ಎಪ್ರಿಲ್‌ನಿಂದ ಈ ವರ್ಷದ ಜನವರಿವರೆಗಿನ ಅವಧಿಯಲ್ಲಿ ಕೇವಲ 631 ಕೋಟಿ ರೂ. ಆದಾಯ ತೆರಿಗೆ ರಿಟರ್ನ್ಸ್ ದಾಖಲು ಮಾಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಶೇ.37ರಷ್ಟು ಅಧಿಕವಾಗಿದೆ. ಇವರಲ್ಲಿ 95 ಲಕ್ಷ ತೆರಿಗೆ ಪಾವತಿದಾರರು ಪ್ರಥಮ ಬಾರಿಗೆ ರಿಟರ್ನ್ಸ್ ದಾಖಲಿಸಿದ್ದಾರೆ. 2018ರ ಆರ್ಥಿಕ ವರ್ಷದಲ್ಲಿ 1.06 ಕೋಟಿ ಹೊಸ ತೆರಿಗೆ ಪಾವತಿದಾರರನ್ನು ಸೇರಿಸಲಾಗಿದ್ದರೆ ಈ ಆರ್ಥಿಕ ವರ್ಷದಲ್ಲಿ 1.25 ಕೋಟಿ ನೂತನ ತೆರಿಗೆ ಪಾವತಿದಾರರನ್ನು ಸೇರಿಸಲು ಉದ್ದೇಶಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.







