ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಟಿಡಿಬಿ ಬೆಂಬಲ: ದೇವಾಲಯ ಆಡಳಿತ ಮಂಡಳಿ ಅಸಮಾಧಾನ

ತಿರುವನಂತಪುರ, 8: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶವನ್ನು ಬೆಂಬಲಿಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ಆದರೆ, ಈ ಬಗ್ಗೆ ದೇವಾಲಯ ಆಡಳಿತ ಅಸಮಾಧಾನ ಗೊಂಡಿದೆ.
ಈ ವಿಷಯದ ಕುರಿತು ನಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ, ಮಾಹಿತಿ ನೀಡಿಲ್ಲ ಎಂದು ಕೆಲವು ಸದಸ್ಯರು ಹೇಳಿದ್ದಾರೆ. ನಿಲುವಿನಲ್ಲಿ ಬದಲಾವಣೆಯಾಗಿರುವ ಬಗ್ಗೆ ನಮಗೆ ತಿಳಿಸಿಲ್ಲ ಎಂದು ಟಿಡಿಬಿಯ ಅಧ್ಯಕ್ಷ ಎ. ಪದ್ಮ ಕುಮಾರ್ ಹೇಳಿದ್ದಾರೆ. ತೀರ್ಪನ್ನು ಅನುಷ್ಠಾನಗೊಳಿಸಲು ಇನ್ನಷ್ಟು ಸಮಯಾವಕಾಶ ನೀಡುವಂತೆ ಮಂಡಳಿ ಕೋರಿತ್ತು. ಆದರೆ, ಯಾವುದೇ ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ ಎಂದು ಅವರು ಹೇಳಿದ್ದಾರೆ.
ಈ ನಿರ್ಧಾರದಲ್ಲಿ ಅಧ್ಯಕ್ಷರು ಪ್ರಮುಖ ಪಾತ್ರ ವಹಿಸಿಲ್ಲ ಎಂದು ಟಿಡಿಪಿ ಒಳಗಿರುವವರು ಹೇಳಿದ್ದಾರೆ. ಈ ನಡುವೆ, ಟಿಡಿಬಿ ನಿಲುವಿನ ವಿರುದ್ಧ ಹೇಳಿಕೆ ನೀಡಿರುವ ಮಂಡಳಿಯ ಅಧ್ಯಕ್ಷರ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಕೆಲವು ವರದಿಗಳು ಹೇಳಿವೆ. ದೇವಸ್ವಂ ಮಂಡಳಿ ಆಯುಕ್ತ ಎನ್. ವಾಸು ಸಿಪಿಎಂನ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣ ಅವರನ್ನು ಸಿಬಿಐನ ಕೇಂದ್ರ ಕಚೇರಿ ಎ.ಕೆ.ಜಿ. ಸೆಂಟರ್‌ನಲ್ಲಿ ಗುರುವಾರ ಭೇಟಿಯಾದ ಬಳಿಕ ವದಂತಿ ಮತ್ತಷ್ಟು ಬಲ ಬಂದಿದೆ.
ಪದ್ಮ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದು ಆ ಸ್ಥಾನಕ್ಕೆ ನೇಮಕಾತಿ ಮಂಡಳಿ ಅಧ್ಯಕ್ಷ ಎಂ. ರಾಜಗೋಪಾಲ್ ನಾಯರ್ ಅವರನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಹೇಳಿವೆ. ಕೇರಳದಲ್ಲಿ 2016ರಲ್ಲಿ ಎಲ್‌ಡಿಎಫ್ ಅಧಿಕಾರಕ್ಕೆ ಬಂದ ನಂತರ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶದ ಬಗ್ಗೆ ಮಂಡಳಿಗೆ ಯಾವುದೇ ವಿರೋಧ ಇರಲಿಲ್ಲ. ಆದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರಕಾರ ಅಸ್ತಿತ್ವಕ್ಕೆ ಬಂದ ಅದು ತೀವ್ರವಾಗಿ ವಿರೋಧಿಸಿತ್ತು.