ಮಾ.2 ರಂದು ರಾಜ್ಯ ವಕ್ಫ್ ಬೋರ್ಡ್ ಚುನಾವಣೆ: ಸಚಿವ ಝಮೀರ್ ಅಹ್ಮದ್

ಬೆಂಗಳೂರು, ಫೆ.8: ರಾಜ್ಯ ವಕ್ಫ್ ಬೋರ್ಡ್‌ನ ಚುನಾವಣೆಯಲ್ಲಿ ಮಾ.2ರಂದು ನಡೆಸಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2016ರ ಆಗಸ್ಟ್ 20ರಂದು ವಕ್ಫ್ ಬೋರ್ಡ್‌ನ ಚುನಾಯಿತ ಸಮಿತಿಯ ಅಧಿಕಾರಾವಧಿ ಪೂರ್ಣಗೊಂಡಿತ್ತು. ಇದೀಗ, ವಕ್ಫ್ ಬೋರ್ಡ್‌ಗೆ ಚುನಾವಣೆ ನಡೆಯುತ್ತಿದೆ ಎಂದರು.
ವಾರ್ಷಿಕ ಒಂದು ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯ ಇರುವ ವಕ್ಪ್ ಸಂಸ್ಥೆಗಳ ಮುತವಲ್ಲಿ ವಿಭಾಗದಿಂದ ಇಬ್ಬರು, ಶಾಸಕಾಂಗ ವಿಭಾಗದಿಂದ ಇಬ್ಬರು, ಸಂಸದರ ಪೈಕಿ ಒಬ್ಬರು ಹಾಗೂ ಬಾರ್ ಕೌನ್ಸಿಲ್‌ನಿಂದ ಒಬ್ಬರನ್ನು ಚುನಾಯಿಸಲಾಗುತ್ತದೆ. 913 ಮತದಾರರನ್ನು ಹೊಂದಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಫೆ.7ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ನಾಮಪತ್ರ ಸಲ್ಲಿಸಲು ಫೆ.14 ಅಂತಿಮ ದಿನವಾಗಿದ್ದು, ಫೆ.15ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಫೆ.18ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಮಾ.2ರಂದು ಮುತವಲ್ಲಿ ವಿಭಾಗದ ಚುನಾವಣೆಗಾಗಿ ಬೆಂಗಳೂರು, ಬೆಳಗಾವಿ, ಕಲಬುರ್ಗಿ ಹಾಗೂ ಮೈಸೂರಿನಲ್ಲಿ ಮತದಾನ ನಡೆಯಲಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಮಾ.7ರಂದು ಬೆಂಗಳೂರಿನಲ್ಲಿ ಮತಗಳ ಎಣಿಕೆ ಕಾರ್ಯ ನಡೆದು, ಅಂದೇ ಫಲಿತಾಂಶ ಹೊರಬೀಳಲಿದೆ. ಈ ಚುನಾವಣೆಯು ಕರ್ನಾಟಕ ವಕ್ಫ್ ನಿಯಮಾವಳಿಗಳು-2017ರ ಪ್ರಕಾರ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.







