ಕೊಡಗಿಗೆ ಉತ್ತಮ ಕೊಡುಗೆ ನೀಡಿದ ಮೈತ್ರಿ ಸರ್ಕಾರ

ಮಡಿಕೇರಿ ಫೆ.8 : ಮೈತ್ರಿ ಸರ್ಕಾರದ ಬಜೆಟ್‍ನಲ್ಲಿ ಕೊಡಗಿಗೆ ಕೋಟಿ ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯನ್ನು ತೃಪ್ತಿ ಪಡಿಸಿದ್ದಾರೆ.
ಕೊಡವ ಸಮುದಾಯದ ಏಳಿಗೆಗಾಗಿ 10 ಕೋಟಿ ರೂ.ಗಳನ್ನು ಮೀಸಲಿಟ್ಟಿರುವ ಮೈತ್ರಿ ಸರ್ಕಾರ ಕೊಡಗಿನ ಹಾಕಿ ಪಟುಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ವಿರಾಜಪೇಟೆಯ ಬಾಳುಗೋಡಿನಲ್ಲಿ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ 5 ಕೋಟಿ ರೂ. ಘೋಷಿಸಿದೆ. ಮಡಿಕೇರಿಯಲ್ಲಿ ಸುಮಾರು 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರೂ.ಗಳನ್ನು ನೀಡಲಾಗಿದೆ. ಮಳೆಹಾನಿ ಪುನರ್ ವಸತಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳಿಗೆ ರೂ.2 ಕೋಟಿ ಮೀಸಲಿಡಲಾಗಿದೆ. ಡ್ರೋನ್ ಬಳಸಿ ಮಳೆಹಾನಿ ಪ್ರದೇಶಗಳ ಮರುಸರ್ವೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಕೊಡವ, ತುಳು, ಕೊಂಕಣಿ ಚಲನಚಿತ್ರಗಳನ್ನು ಪ್ರೋತ್ಸಾಹಿಸಲು 1 ಕೋಟಿ ರೂ. ನೀಡಲಾಗುತ್ತಿದೆ. ಕೊಡಗಿಗೆ ವಸತಿ ಶಾಲೆಯೂ ಮಂಜೂರಾಗಿದೆ. ಕೊಡವ ಮತ್ತು ಅರೆ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೂ ಅನುದಾನ ಮೀಸಲಿಡಲಾಗಿದೆ.
ಅಲ್ಲದೆ ಕೊಡಗಿನ ಹೆಮ್ಮೆಯ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಹೆಸರಿನಲ್ಲಿ ಸಾಹಸ ಕ್ರೀಡಾ ಅಕಾಡೆಮಿ ಸ್ಥಾಪಿಸಿ ರಾಜ್ಯದ 10 ಜಿಲ್ಲೆಗಳಲ್ಲಿ ಸಾಹಸ ಕ್ರೀಡೋತ್ಸವವನ್ನು ನಡೆಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ರೂ. 2 ಕೋಟಿ ಮೀಸಲಿಡಲಾಗಿದೆ.
ಜನಪರ ಬಜೆಟ್: ಕಾಂಗ್ರೆಸ್ ಮೆಚ್ಚುಗೆ
ರಾಜ್ಯ ಮೈತ್ರಿ ಸರ್ಕಾರ ಮಂಡಿಸಿರುವ ಬಜೆಟ್ ಜನಪರ ಹಾಗೂ ರೈತಪರವಾದ ಬಜೆಟ್ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ.ಎಸ್.ಟಾಟು ಮೊಣ್ಣಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಜೆಟ್‍ನಲ್ಲಿ ಎಲ್ಲಾ ವರ್ಗದ ಜನರಿಗೂ ಅನುಕೂಲ ಕಲ್ಪಿಸಲಾಗಿದ್ದು, ಕೊಡಗು ಜಿಲ್ಲೆಗೂ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಹಾಕಿ ಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಬಾಳುಗೋಡಿನಲ್ಲಿ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ ರೂ.5 ಕೋಟಿಗಳನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಲ್ಲದೆ ಕೊಡವ ಸಮುದಾಯ ಸೇರಿದಂತೆ ಎಲ್ಲಾ ವರ್ಗಗಳ ಅಭ್ಯುದಯಕ್ಕಾಗಿ ಅನುದಾನ ಮೀಸಲಿಟ್ಟಿರುವುದು ಅತ್ಯಂತ ಶ್ಲಾಘನೀಯ. ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಿಕ ಒಂದು ಸಾವಿರ ರೂ. ನೀಡುವುದು, ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಗೌರವ ಧನ ಏರಿಕೆ ಮಾಡಿರುವುದು, ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಭತ್ತ ಕೃಷಿ ಮಾಡುವ ರೈತರಿಗೆ 1 ಹೆಕ್ಟೆರ್ ಗೆ 7,500 ರೂ. ಪ್ರೋತ್ಸಾಹಧನ ಘೋಷಣೆ, ಇದೇ ಜೂನ್ ತಿಂಗಳೊಳಗೆ ಸಹಕಾರಿ ಸಂಘಗಳ ರೈತರ ಸಾಲಮನ್ನಾ ಮಾಡುವುದು ಸೇರಿದಂತೆ ಅನೇಕ ಜನಪರ ಹಾಗೂ ರೈತಪರ ಅನುಕೂಲಗಳನ್ನು ಘೋಷಿಸಿರುವುದು ಮೈತ್ರಿ ಸರ್ಕಾರದ ಹೆಗ್ಗಳಿಕೆ ಎಂದು ಟಾಟುಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸರ್ವ ಸಮಾನ ಬಜೆಟ್: ಕೆ.ಯು.ಅಬ್ದುಲ್ ರಝಾಕ್
ರೈತರ, ಜನಸಾಮಾನ್ಯರ ಹಾಗೂ ಎಲ್ಲಾ ವರ್ಗಗಳ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ವ ಸಮಾನವಾದ ಬಜೆಟ್‍ನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ ಎಂದು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು.ಅಬ್ದುಲ್ ರಝಾಕ್ ತಿಳಿಸಿದ್ದಾರೆ.
ಆಟೋಚಾಲಕರು ಸೇರಿದಂತೆ ಎಲ್ಲಾ ಶ್ರಮಿಕ ಸಮುದಾಯದ ಹಿತ ಕಾಯುವ ಪ್ರಯತ್ನದ ಮೈತ್ರಿ ಸರ್ಕಾರದ ಬಜೆಟ್‍ನಲ್ಲಿ ರೈತಪರ ನಿರ್ಧಾರಗಳನ್ನು ಅತ್ಯಂತ ಧೈರ್ಯದಿಂದ ತೆಗೆದುಕೊಳ್ಳಲಾಗಿದೆ. ಮಠ, ಮಸೀದಿ, ಮಂದಿರ, ಚರ್ಚ್‍ಗಳಿಗೆ ಸಮಾನ ರೀತಿಯಲ್ಲಿ ಅನುದಾನ ನೀಡುವ ಮೂಲಕ ಸಮಾನತೆಯನ್ನು ಪ್ರತಿಪಾದಿಸಲಾಗಿದೆ. ಅಲ್ಪಸಂಖ್ಯಾತರ ಕಬರಸ್ಥಾನಗಳ ಅಭಿವೃದ್ಧಿಗೆ ರೂ.10 ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಕೊಡಗಿನ ಮಳೆಹಾನಿ ಪುನರ್ ವಸತಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳಿಗೆ 2 ಕೋಟಿ ರೂ.ಗಳನ್ನು ನಿಗದಿ ಮಾಡಿರುವುದು ಮತ್ತು ಕ್ರೀಡೆಗೆ ಪ್ರೋತ್ಸಾಹ ನೀಡಿರುವುದು ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಮೇಲಿರುವ ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಅಬ್ದುಲ್ ರಝಾಕ್ ಅಭಿಪ್ರಾಯಪಟ್ಟಿದ್ದಾರೆ.
ರೈತಾಪಿ ವರ್ಗದ ಏಳಿಗೆಯ ಬಜೆಟ್ : ಪದ್ಮಿನಿ ಪೊನ್ನಪ್ಪ
ಕರ್ನಾಟಕದ ಇತಿಹಾಸದಲ್ಲೆ ಬೃಹತ್ ಗಾತ್ರದ ಬಜೆಟ್ ಇದಾಗಿದ್ದು, ರೈತಾಪಿ ವರ್ಗಕ್ಕೆ ಈ ಬಜೆಟ್ ವರದಾನವಾಗಿದೆ ಎಂದು ರಾಜ್ಯ ಜನತಾದಳದ ಪ್ರಧಾನ ಕಾರ್ಯದರ್ಶಿ ಪದ್ಮಿನಿ ಪೊನ್ನಪ್ಪ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ಪ್ರದೇಶ ಮತ್ತು ನಗರ ಪದ್ರೇಶಗಳ ಸರ್ವತೋಮುಖ ಅಭಿವೃದ್ದಿಗೆ ಮೈತ್ರಿ ಸರ್ಕಾರದ ಚಿಂತನೆಗಳು ಪೂರಕವಾಗಿದ್ದು, ಸಾರ್ವಜನಿಕ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಕಾರ್ಮಿಕ ವಲಯಗಳು ಸೇರಿದಂತೆ ಎಲ್ಲಾ ವರ್ಗದ ಅಭ್ಯುದಯಕ್ಕೂ ಬಜೆಟ್‍ನಲ್ಲಿ ಆದ್ಯತೆ ನೀಡಲಾಗಿದೆ. ಮಳೆಹಾನಿ ಪುನರ್ ವಸತಿ ಪ್ರಾಧಿಕಾರಕ್ಕೆ 2 ಕೋಟಿ ಅನುದಾನ ನೀಡಿರುವುದು ಸ್ವಾಗತಾರ್ಹ ಎಂದಿದ್ದಾರೆ.
ತಾಲೂಕು ಘೋಷಣೆಯಾಗದೆ ಇರುವುದು ನಿರಾಶೆ: ಎಂಎಲ್‍ಸಿ ಸುನಿಲ್ ಸುಬ್ರಮಣಿ
ಕೊಡಗಿನ ಜನರ ಹಲವು ವರ್ಷಗಳ ಬೇಡಿಕೆಯಾದ ಕುಶಾಲನಗರ ಹಾಗೂ ಪೊನ್ನಂಪೇಟೆ ಪ್ರತ್ಯೇಕ ತಾಲೂಕುಗಳ ರಚನೆಗೆ ಸರ್ಕಾರ ಮುಂದಾಗದೇ ಇರುವುದು ಅತೀವ ನಿರಾಶೆಯನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಸುನಿಲ್ ಸುಬ್ರಮಮಣಿ ತಿಳಿಸಿದ್ದಾರೆ.
ಪ್ರತ್ಯೇಕ ತಾಲೂಕುಗಳ ರಚನೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿತ್ತು. ಆದರೆ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಕಳೆದ ಮಳೆಹಾನಿಯ ಸಂತ್ರಸ್ತರಿಗೆ ಇಲ್ಲಿಯವರೆಗೆ ಮನೆಗಳನ್ನು ನಿರ್ಮಿಸಿಕೊಡಲಿಲ್ಲ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಬಗ್ಗೆ ಯಾವುದೇ ಭರವಸೆಗಳಿಲ್ಲ. ಆದರೆ ಮಡಿಕೇರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರೂ. ಘೋಷಿಸಿರುವುದು, ಹಾಕಿ ಕ್ರೀಡಾಂಗಣ ನಿಮಾಣಕ್ಕೆ 5 ಕೋಟಿ ಹಾಗೂ ಕೊಡವ ಸಮುದಾಯದ ಅಭಿವೃದ್ಧಿಗೆ 10 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹವೆಂದು ಸುನಿಲ್ ಸುಬ್ರಮಣಿ ತಿಳಿಸಿದ್ದಾರೆ.







