ಸೌಹಾರ್ದದ ಪರಂಪರೆ ಮುಂದುವರಿಸೋಣ: ಗೃಹ ಸಚಿವ ಎಂ.ಬಿ.ಪಾಟೀಲ್
‘ಬ್ಯಾರಿ ಮೇಳ’ಕ್ಕೆ ಅದ್ದೂರಿಯ ಚಾಲನೆ

ಮಂಗಳೂರು, ಫೆ. 8: ವಿವಿಧತೆಯಲ್ಲಿ ಏಕತೆಯನ್ನು ಕಂಡ ಭಾರತದಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರು ಅತ್ಯಂತ ಸೌಹಾರ್ದದ ಬದುಕನ್ನು ಕಂಡಿದ್ದರು. ಕೆಲವೇ ಕೆಲವು ಕೋಮುವಾದಿ ಶಕ್ತಿಗಳ ಮಾತಿಗೆ ಬಲಿಬೀಳದೆ ಸೌಹಾರ್ದ ಮಂಗಳೂರು, ಸೌಹಾರ್ದ ಕರ್ನಾಟಕ, ಸೌಹಾರ್ದ ಭಾರತವನ್ನು ಕಟ್ಟಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಆ ಮೂಲಕ ಸೌಹಾರ್ದದ ಪರಂಪರೆಯನ್ನು ಮುಂದುವರಿಸುವ ಇಚ್ಛಾಶಕ್ತಿ ಮೈಗೂಡಿಸಿಕೊಳ್ಳೋಣ ಎಂದು ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ವತಿಯಿಂದ ನಗರದ ಪುರಭವನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ‘ಬ್ಯಾರಿ ಮೇಳ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲಕ್ಕೆ ಶಿಕ್ಷಣ ಸಹಿತ ಎಲ್ಲಾ ರಂಗಗಳಲ್ಲೂ ಹಿಂದುಳಿದಿದ್ದ ಬ್ಯಾರಿ ಸಮುದಾಯವು ಇಂದು ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕ ರಂಗಗಳಲ್ಲಿ ಭಾರೀ ಮುಂದುವರಿದಿದೆ. ಇದಕ್ಕೆ ಬ್ಯಾರಿಗಳ ಶ್ರಮ ಜೀವನವೇ ಕಾರಣವಾಗಿದೆ. ದೇಶವಿದೇಶದಲ್ಲಿ ಸುಮಾರು 25 ಲಕ್ಷದಷ್ಟಿರುವ ಬ್ಯಾರಿ ಸಮುದಾಯ ಇಂದು ಹೆಮ್ಮರವಾಗಿ ಬೆಳೆಯಲು ಎಲ್ಲರ ಪರಿಶ್ರಮವಿದೆ. ಹೀಗಿರುವಾಗ ಸ್ವಾರ್ಥಕ್ಕಾಗಿ ಸೌಹಾರ್ದವನ್ನು ಕೆಡಿಸುವವರ ಮಾತಿಗೆ ಕಿವಿಗೊಡದೆ ಸಮಾಜವನ್ನು ಬಲಿಷ್ಠವಾಗಿ ಕಟ್ಟಲು ಮುಂದಾಗಿ ಎಂದು ಸಚಿವ ಎಂ.ಬಿ. ಪಾಟೀಲ್ ನುಡಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರ ಬೇಡಿಕೆಯಂತೆ ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮುಡಿಪುವಿನಲ್ಲಿ ಅಗ್ನಿಶಾಮಕ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಘೋಷಿಸಿದರು.
ರಾಜ್ಯ ಗೃಹ ಸಚಿವ ಡಾ.ಎಂ.ಬಿ.ಪಾಟೀಲ್ ಗಿಡಕ್ಕೆ ನೀರು ಸುರಿಯುವ ಮೂಲಕ ಮೇಳಕ್ಕೆ ಚಾಲನೆ ನೀಡಿದರಲ್ಲದೆ, ತನ್ನ ಉದ್ಘಾಟನಾ ಭಾಷಣದಲ್ಲಿ ‘ನಿಙ ಎಙನೆ ರಹಾತ್ ಉಲ್ಲಾರಾ ?’ಎಂದು ಬ್ಯಾರಿ ಭಾಷೆಯಲ್ಲಿ ಕೇಳುವ ಮೂಲಕ ಮಾತು ಆರಂಭಿಸಿದರು. ಬಿಸಿಸಿಐ ಹೊರತಂದ ‘ಸ್ಮರಣ ಸಂಚಿಕೆ’ಯನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಿಸಿಸಿಐ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಕೆ.ಎಸ್. ಮುಹಮ್ಮದ್ ಮಸೂದ್, ಜೆ.ಆರ್. ಲೋಬೊ, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಬ್ಯಾರಿ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್, ಕೆಸಿಸಿಐ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ಟ್ರೋಪಿಕಲ್ ಗ್ರೂಪ್‌ನ ಅಧ್ಯಕ್ಷ ಕೆ. ಖಾಲಿದ್ ಬಾವಾ, ಲಿಟ್ಲ್ ಫ್ಲವರ್ ಸ್ಕೂಲ್‌ನ ಇಕ್ಬಾಲ್ ಅಹ್ಮದ್ ಬೆಂಗಳೂರು, ಬಿಸಿಸಿಐ ಯುಎಇ ಘಟಕದ ಅಧ್ಯಕ್ಷ ಎಸ್.ಎಂ. ಬಶೀರ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಕಾರ್ಪೊರೇಟರ್ ಅಬ್ದುರ್ರವೂಫ್, ಮುಕ್ಕ ಸೀ ಫುಡ್‌ನ ಅಬ್ದುಲ್ ರಝಾಕ್ ಕಲಂದರ್, ಕೋಸ್ಟಲ್ ಗ್ರೂಪ್‌ನ ಅಧ್ಯಕ್ಷ ಎಂ. ಅಬ್ದುಲ್ ರಶೀದ್, ಬ್ಲುಲೈನ್ ಫುಡ್ಸ್‌ನ ಅನ್ವರ್ ಹುಸೈನ್, ಜನತಾ ವುಡ್ ಇಂಡಸ್ಟ್ರೀಸ್‌ನ ಸಿ. ಮಹ್ಮೂದ್, ಡೆಲ್ಟಾ ಗ್ರೂಪ್‌ನ ಅಧ್ಯಕ್ಷ ಮೊಯ್ದಿನ್ ಅಹ್ಮದ್, ಸ್ಟೀಲ್ ಸೆಂಟರ್‌ನ ಮೂಸಾ ಮೊಯ್ದಿನ್, ನಿವೃತ್ತ ಡಿಸಿಪಿ ಜಿ.ಎ.ಬಾವ, ಎಕ್ಸ್‌ಪರ್ಟೈಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಸೈಯದ್ ಕರ್ನಿರೆ, ಬ್ಯಾರಿ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ.ಅಬ್ದುರ್ರಹ್ಮಾನ್, ಮುಹಮ್ಮದ್ ಅಲಿ ಉಚ್ಚಿಲ್, ಡೆಲ್ಟಾ ರೆಡಿಮಿಕ್ಸ್ ಕಾಂಕ್ರೀಟ್ ಆ್ಯಂಡ್ ಇಂಡಸ್ಟ್ರೀಸ್‌ನ ಬದ್ರುದ್ದೀನ್, ಜಮಾಅತೆ ಇಸ್ಲಾಮೀ ಹಿಂದ್‌ನ ಮಾಜಿ ಅಧ್ಯಕ್ಷ ಕೆ.ಎಂ.ಶರೀಫ್, ಫಹಾದ್ ಫಿಶ್ ಮೀಲ್ ಆ್ಯಂಡ್ ಆಯಿಲ್ ಕಂಪೆನಿಯ ಯು.ಎನ್. ಅಬ್ದುರ್ರಝಾಕ್, ಬಹರೈನ್‌ನ ಮನ್ಸೂರ್ ಅಹ್ಮದ್, ಬಿಸಿಸಿಐ ಚಿಕ್ಕಮಗಳೂರು ಘಟಕದ ಅಧ್ಯಕ್ಷ ಅಬ್ದುಸ್ಸತ್ತಾರ್, ಹಾಸನ ಘಟಕದ ಅಧ್ಯಕ್ಷ ಝಾಕಿರ್, ಮುಸ್ಲಿಂ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್ ಫೆಡರೇಶನ್‌ನ ಅಧ್ಯಕ್ಷ ಮುಹಮ್ಮದ್ ಬ್ಯಾರಿ ಎಡಪದವು, ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎ.ಎ. ಹೈದರ್ ಪರ್ತಿಪ್ಪಾಡಿ, ಹಿದಾಯ ಫೌಂಡೇಶನ್‌ನ ಹನೀಫ್ ಹಾಜಿ ಗೋಳ್ತಮಜಲು, ಜಮೀಯ್ಯತುಲ್ ಫಲಾಹ್‌ನ ದ.ಕ.ಜಿಲ್ಲಾ ಅಧ್ಯಕ್ಷ ಶಾಹುಲ್ ಹಮೀದ್, ಸುಳ್ಯ ಪಟ್ಟಣ ಪಂಚಾಯತ್‌ನ ಸದಸ್ಯ ಮುಹಮ್ಮದ್ ಮುಸ್ತಫಾ, ಬ್ಯಾರಿ ಸ್ಪೋರ್ಟ್ಸ್ ಪ್ರಮೋಟರ್ಸ್‌ನ ಅಧ್ಯಕ್ಷ ಮುಹಮ್ಮದ್ ಹುಸೈನ್, ಟಿ.ಎಂ.ಶಹೀದ್, ಮುಹಮ್ಮದ್ ಮೋನು, ಏಸ್ ಫೌಂಡೇಶನ್‌ನ ಅಧ್ಯಕ್ಷ ಸಾದುದ್ದೀನ್ ಸಾಲಿಹ್, ವಾರ್ತಾಧಿಕಾರಿ ಖಾದರ್ ಶಾ ಮತ್ತಿತರರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಬಿಸಿಸಿಐ ಉಪಾಧ್ಯಕ್ಷ ಝಕರಿಯಾ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಮ್ತಿಯಾಝ್, ಕಾರ್ಯದರ್ಶಿಗಳಾದ ಅಶ್ರಫ್ ಕರ್ನಿರೆ ಮತ್ತು ಮುಹಮ್ಮದ್ ನಿಝಾರ್, ಬಿ.ಎಂ.ಮುಮ್ತಾಝ್ ಅಲಿ, ಹಾರಿಸ್ ಮುಕ್ಕ, ಕಾಸಿಂ ಅಹ್ಮದ್, ಹಿದಾಯತುಲ್ಲಾ ಅಡ್ಡೂರು, ಅಸ್ಗರ್ ಅಲಿ, ಬಿ.ಎ.ನಝೀರ್ ಮತ್ತಿತರರು ಉಪಸ್ಥಿತರಿದ್ದರು.
ಬಿಸಿಸಿಐ ಕೋಶಾಧಿಕಾರಿ ಹಾಗೂ ಬ್ಯಾರಿ ಮೇಳದ ಸಂಚಾಲಕ ಮನ್ಸೂರ್ ಅಹ್ಮದ್ ಆಝಾದ್ ಸ್ವಾಗತಿಸಿದರು. ಹಾಫಿಝ್ ಹಸನ್ ಆಶಿಕ್ ಅಬ್ದುಲ್ಲಾ ಕಿರಾಅತ್ ಪಠಿಸಿದರು. ಟಿಆರ್‌ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ವಸ್ತುಪ್ರದರ್ಶನ-ಮಾರಾಟ ಮಳಿಗೆಗಳ ಉದ್ಘಾಟನೆ
ವಾಣಿಜ್ಯೋದ್ಯಮ ಸ್ಥಾಪನೆಗೆ ಅವಕಾಶ ಮತ್ತು ಉತ್ತೇಜನ, ವ್ಯಾಪಾರಕ್ಕೆ ಪ್ರೋತ್ಸಾಹ, ಉದ್ಯೋಗ-ವ್ಯಾಪಾರ ಅವಕಾಶ ಸೃಷ್ಟಿಯ ಉದ್ದೇಶದೊಂದಿಗೆ ಪುರಭವನದ ಆವರಣದಲ್ಲಿ ತೆರೆಯಲಾದ ಸುಮಾರು 100ರಷ್ಟಿರುವ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಯೆನೆಪೊಯ ವಿವಿಯ ಕುಲಪತಿ ವೈ. ಅಬ್ದುಲ್ಲಾ ಕುಂಞಿ ವಸ್ತುಪ್ರದರ್ಶನ ಉದ್ಘಾಟಿಸಿ ಶುಭ ಹಾರೈಸಿದರು.
ಸಾಧಕ ಪ್ರಶಸ್ತಿ: ಬಿಎ ಗ್ರೂಪ್‌ನ ಸ್ಥಾಪಕಾಧ್ಯಕ್ಷ ಡಾ.ಬಿ.ಅಹ್ಮದ್ ಮೊಹಿಯುದ್ದೀನ್‌ರಿಗೆ ಬಿಸಿಸಿಐ ಜೀವಮಾನ ಸಾಧನಾ ಪ್ರಶಸ್ತಿ, ಕಣ್ಣೂರು ವಿವಿಯ ಮಾಜಿ ಉಪಕುಲಪತಿ ಡಾ.ಎಂ.ಅಬ್ದುಲ್ ರಹ್ಮಾನ್ ಅವರಿಗೆ ಬಿಸಿಸಿಐ ಅಕಾಡಮಿಕ್ ಎಕ್ಸಲೆನ್ಸ್ ಅವಾರ್ಡ್, ಕೆ.ಎಸ್. ಶೇಖ್ ಕರ್ನಿರೆ ಅವರಿಗೆ ಬಿಸಿಸಿಐ ಎನ್‌ಆರ್‌ಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್, ಎ.ಕೆ. ಗ್ರೂಪ್ ಆ್ ಕಂಪೆನೀಸ್ ಸ್ಥಾಪಕಾಧ್ಯಕ್ಷ ಎ.ಕೆ.ಅಹ್ಮದ್ ಅವರಿಗೆ ಬಿಸಿಸಿಐ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನಿಸಲಾಯಿತು.
ಈ ಸಂದರ್ಭ ಸ್ಕೇಟಿಂಗ್‌ನಲ್ಲಿ ಗಿನ್ನೆಸ್ ದಾಖಲೆಗೈದ 8ರ ಹರೆಯದ ಬಾಲಕ ಮುಹಮ್ಮದ್ ಫರಾಝ್ ಅಲಿ ಅವರನ್ನು ಗೌರವಿಸಲಾಯಿತು.
ಫೆ. 9 ಹಾಗೂ 10ರಂದು ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಬ್ಯಾರಿ ಮೇಳ ಮುಂದುವರಿಯಲಿದೆ. ಫೆ.9ರಂದು ಸಂಜೆ 4:30ರಿಂದ 7ರವರೆಗೆ ‘ಬ್ಯಾರೀಸ್ ಗಾಟ್ ಟ್ಯಾಲೆಂಟ್’ ಎಂಬ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. 10ರಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ‘ದೇಶ ವಿದೇಶಗಳ ಯಶಸ್ವಿ ಉದ್ಯಮಿ’ಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಪ್ರತೀ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.





























































































































