ಥಾಯ್ಲೆಂಡ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್
ಬೆಳ್ಳಿಯ ನಗೆ ಬೀರಿದ ಜೆರೆಮಿ

ಹೊಸದಿಲ್ಲಿ, ಫೆ.8: ಥಾಯ್ಲೆಂಡ್‌ನ ಚಿಯಾಂಗ್ ಮೈಯಲ್ಲಿ ನಡೆದ ಅಂತರ್‌ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಯೂತ್ ಒಲಿಂಪಿಕ್ಸ್ ಚಾಂಪಿಯನ್ ಜೆರೆಮಿ ಲಾಲ್‌ರಿನ್ನುಂಗಾ ಪುರುಷರ 67 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿಪದಕ ಜಯಿಸಿದ್ದಾರೆ. ಇದು ಚಾಂಪಿಯನ್‌ಶಿಪ್‌ನಲ್ಲಿ ಭಾರತ ಜಯಿಸಿದ ಎರಡನೇ ಪದಕವಾಗಿದೆ.
16ರ ಹರೆಯದ ಬಾಲಕ ಲಾಲ್‌ರಿನ್ನುಂಗಾ ಸ್ನಾಚ್‌ನಲ್ಲಿ 131 ಕೆಜಿ ಹಾಗೂ ಕ್ಲೀನ್-ಜರ್ಕ್‌ನಲ್ಲಿ 157 ಕೆಜಿ ಸಹಿತ ಒಟ್ಟು 288 ಕೆಜಿ ಎತ್ತಿ ಹಿಡಿದು ಎರಡನೇ ಸ್ಥಾನ ಪಡೆದರು. ಮಿರೆರಾಂನ ಭರವಸೆಯ ವೇಟ್‌ಲಿಫ್ಟರ್ ಬೆಳ್ಳಿ ಜಯಿಸಿದರೆ, ಚಿನ್ನದ ಪದಕ ಇಂಡೋನೇಶ್ಯಾದ ಡೆನಿ(132+171)ಪಾಲಾಯಿತು. ಡೆನಿ ಒಟ್ಟು 303 ಕೆಜಿ ಎತ್ತಿಹಿಡಿದರು.
ಲಾಲ್‌ರೆನ್ನುಂಗಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬ್ಯುನಸ್‌ಐರಿಸ್‌ನಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದರು. 62 ಕೆಜಿ ವಿಭಾಗದಲ್ಲಿ ಒಟ್ಟು 274 ಕೆಜಿ(124+150)ತೂಕ ಎತ್ತಿಹಿಡಿದಿದ್ದರು.
ಈ ಟೂರ್ನಿಯಲ್ಲಿ ಗಳಿಸಿದ ಅಂಕವನ್ನು 2020ರ ಟೋಕಿಯೊ ಒಲಿಂಪಿಕ್ಸ್‌ನ ಫೈನಲ್ ರ್ಯಾಂಕಿನ ವೇಳೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದೇ ವೇಳೆ 59 ಕೆಜಿ ವಿಭಾಗದಲ್ಲಿ ಸ್ವಾತಿ ಸಿಂಗ್ ಹಾಗೂ ಕೆ.ಶ್ರೀಶಾ ಆರನೇ ಹಾಗೂ 9ನೇ ಸ್ಥಾನ ಪಡೆದರು.
ಗುರುವಾರ ನಡೆದ ಮಹಿಳೆಯರ 49 ಕೆಜಿ ತೂಕ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಸೈಖೋಮ್ ಮೀರಾಬಾಯಿ ಒಟ್ಟು 192 ಕೆಜಿ ಎತ್ತಿಹಿಡಿದು ಚಿನ್ನದ ಪದಕ ಜಯಿಸಿದ್ದರು.







