ಭಾರತಕ್ಕೆ ಸತತ ಸೋಲು: ನ್ಯೂಝಿಲೆಂಡ್‌ಗೆ ಸರಣಿ
ಎರಡನೇ ಟ್ವೆಂಟಿ-20

ಪಂದ್ಯಶ್ರೇಷ್ಠಸುಝಿ ಬೇಟ್ಸ್
ಆಕ್ಲಂಡ್, ಫೆ.8: ಮಧ್ಯಮ ಕ್ರಮಾಂಕದ ಆಟಗಾರ್ತಿಯರ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ತಂಡ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ಎರಡನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು 4 ವಿಕೆಟ್‌ಗಳಿಂದ ಸೋತಿದೆ. ಸತತ ಎರಡನೇ ಪಂದ್ಯವನ್ನು ಸೋತಿರುವ ಭಾರತ ಸರಣಿ ಕಳೆದುಕೊಂಡಿದೆ.
ಭಾರತ ಮಹಿಳಾ ತಂಡ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ 23 ರನ್‌ನಿಂದ ಸೋತಿತ್ತು.
ಸರಣಿಯಲ್ಲಿ ಸ್ಪರ್ಧೆಯಲ್ಲಿರಲು ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿದ ಹೊರತಾಗಿಯೂ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಶಕ್ತವಾಯಿತು.
ಗೆಲ್ಲಲು ಸಾಧಾರಣ ಸವಾಲು ಪಡೆದ ನ್ಯೂಝಿಲೆಂಡ್ ಆರು ವಿಕೆಟ್‌ಗಳನ್ನು ಕಳೆದುಕೊಂಡು ಪಂದ್ಯದ ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಪರ ಜೆಮಿಮಾ ರೊಡ್ರಿಗಸ್ 53 ಎಸೆತಗಳಲ್ಲಿ ಆರು ಬೌಂಡರಿ, 1 ಸಿಕ್ಸರ್‌ಗಳಿದ್ದ 72 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. ಜೆಮಿಮಾ ಹಾಗೂ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನಾ(36 ರನ್, 27 ಎಸೆತ)2ನೇ ವಿಕೆಟ್‌ಗೆ 63 ರನ್ ಜೊತೆಯಾಟ ನಡೆಸಿದ ಹೊರತಾಗಿಯೂ ಭಾರತ 20 ರನ್ ಕೊರತೆ ಎದುರಿಸಿತು.
ಗೆಲ್ಲಲು ಸುಲಭ ಸವಾಲು ಪಡೆದ ಕಿವೀಸ್ ತಂಡದ ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಆಟಗಾರ್ತಿಯರಾದ ಸೋಫಿ ಡಿವೈಟ್(19) ಹಾಗೂ ಕೈಟ್ಲಿನ್ ಗುರ್ರೆ(4) ಏಳನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದಾಗ ಕಿವೀಸ್ ಸ್ಕೋರ್ 40ಕ್ಕೆ 2.
ಸುಝಿ ಬೇಟ್ಸ್(62) ಹಾಗೂ ಆ್ಯಮಿ ಸ್ಯಾಟರ್ತ್‌ವೇಟ್(23)3ನೇ ವಿಕೆಟ್‌ಗೆ 61 ರನ್ ಜೊತೆಯಾಟ ನಡೆಸಿ ನ್ಯೂಝಿಲೆಂಡ್ ಇನಿಂಗ್ಸ್‌ನ್ನು ಹಳಿಗೆ ತಂದರು. ಎಡಗೈ ಸ್ಪಿನ್ನರ್ ರಾಧಾ ಯಾದವ್(2-23) ಹಾಗೂ ಮಧ್ಯಮ ವೇಗದ ಬೌಲರ್ ಅರುಂಧತಿ ರೆಡ್ಡಿ(2-22)ಮಧ್ಯಮ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಿ ಕಿವೀಸ್‌ಗೆ ಭೀತಿ ಹುಟ್ಟಿಸಿದ್ದರು. 18ನೇ ಓವರ್‌ನಲ್ಲಿ ಎರಡು ವಿಕೆಟ್ ಉರುಳಿಸಿದ ರೆಡ್ಡಿ ಭಾರತಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದರು.
ನ್ಯೂಝಿಲೆಂಡ್‌ಗೆ ಅಂತಿಮ ಓವರ್‌ನಲ್ಲಿ 9 ರನ್ ಅಗತ್ಯವಿತ್ತು. ಕಾಟೆ ಮಾರ್ಟಿನ್ ಅವರು ಮಾನ್ಸಿ ಜೋಶಿ ಬೌಲಿಂಗ್‌ನ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. ಆಗ ಆತಿಥೇಯರಿಗೆ 5 ಎಸೆತಗಳಲ್ಲಿ 5 ರನ್ ಅಗತ್ಯವಿತ್ತು. ಮುಂದಿನ ಎಸೆತದಲ್ಲಿ ಮಾರ್ಟಿನ್ ವಿಕೆಟ್ ಪಡೆದ ಜೋಶಿ ತಕ್ಕ ಸೇಡು ತೀರಿಸಿಕೊಂಡರು. ಕಳಪೆ ಫೀಲ್ಡಿಂಗ್ ಭಾರತಕ್ಕೆ ಮುಳುವಾಯಿತು. ಹನ್ನಾ ರೋವಿ (4) ಹಾಗೂ ಲೆಘ್ ಕಾಸ್ಪೆರೆಕ್(4) ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡಕ್ಕೆ ರೋಚಕ ಗೆಲುವು ತಂದರು.







