ವಿಶ್ವಕಪ್: ರಿಕಿ ಪಾಂಟಿಂಗ್ ಆಸೀಸ್ ಸಹಾಯಕ ಕೋಚ್

ಮೆಲ್ಬೋರ್ನ್,ಫೆ.8: ಈ ವರ್ಷದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ತಂಡದ ಸಹಾಯಕ ಕೋಚ್ ಆಗಿ ಆಸೀಸ್‌ನ ಮಾಜಿ ಕಪ್ತಾನ ರಿಕಿ ಪಾಂಟಿಂಗ್ ಅವರನ್ನು ನೇಮಿಸಲಾಗಿದೆ. ಆಸ್ಟ್ರೇಲಿಯ ತಂಡದ ಬ್ಯಾಟಿಂಗ್ ಕೋಚ್ ಗ್ರೀಮ್ ಹಿಕ್ ಸದ್ಯ ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಆ್ಯಶಸ್ ಸರಣಿಗೆ ತಂಡವನ್ನು ಸಿದ್ಧಗೊಳಿಸುತ್ತಿದ್ದರೆ, ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿರುವ ವಿಶ್ವಕಪ್ ಹಣಾಹಣಿಯಲ್ಲಿ ಬ್ಯಾಟ್ಸ್‌ಮನ್‌ಗಳನ್ನು ತಯಾರುಗೊಳಿಸುವ ಹೊಣೆಯನ್ನು ರಿಕಿ ಪಾಂಟಿಂಗ್ ಪಡೆದುಕೊಂಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಆಸೀಸ್ ಪಾಳಯ ಎರಡು ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ.
ಗುರುವಾರದಂದು ತಂಡದ ಬೌಲಿಂಗ್ ಕೋಚ್ ಡೇವಿಡ್ ಸೇಕರ್ ತಕ್ಷಣ ಜಾರಿಯಾಗುವಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರೆ ಮರುದಿನವೇ ಪಾಂಟಿಂಗ್ ಅವರನ್ನು ಬ್ಯಾಟಿಂಗ್ ಸಹಾಯಕ ಕೋಚ್ ಆಗಿ ನೇಮಕ ಮಾಡಲಾಗಿದೆ. ಸದ್ಯ ಡೇವಿಡ್ ಸೇಕರ್ ಸ್ಥಾನಕ್ಕೆ ಟ್ರಾಯ್ ಕೂಲಿಯವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ. ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯ ಎರಡು ಬಾರಿ ವಿಶ್ವಕಪ್ ಜಯಿಸಿತ್ತು. ಹಾಗಾಗಿ ಅವರನ್ನು ಬ್ಯಾಟಿಂಗ್ ಸಹಾಯಕ ಕೋಚ್ ಆಗಿ ನೇಮಕ ಮಾಡಿರುವ ಬಗ್ಗೆ ಆಟಗಾರರಲ್ಲಿ ಏಕಮತವಿದೆ. ಪಾಂಟಿಂಗ್ ನೇಮಕದಿಂದ ಇಂಗ್ಲೆಂಡ್‌ನಲ್ಲಿ ತಂಡದ ಗೆಲುವಿಗೆ ಬಹಳ ಅನುಕೂಲವಾಗಲಿದೆ ಎಂದು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.







