50 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ ಪಿ.ವಿ.ಸಿಂಧು
ಹೊಸದಿಲ್ಲಿ,ಫೆ.8: ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಚೀನಾದ ಪ್ರಖ್ಯಾತ ಕ್ರೀಡಾ ಸಾಮಗ್ರಿ ಉತ್ಪಾದಕ ಸಂಸ್ಥೆ ಲಿ ನಿಂಗ್ ಜೊತೆ 50 ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕಳೆದ ತಿಂಗಳು ಭಾರತದ ಪುರುಷ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಜೊತೆ 35 ಕೋಟಿ ರೂ. ಮೊತ್ತದ ನಾಲ್ಕು ವರ್ಷಗಳ ಅವಧಿಯ ಒಪ್ಪಂದಕ್ಕೆ ಲಿ ನಿಂಗ್ ಸಂಸ್ಥೆ ಸಹಿ ಹಾಕಿಕೊಂಡಿತ್ತು. ಸಿಂಧು ಜೊತೆ ಸಹಿ ಹಾಕಲಾಗಿರುವ ಒಪ್ಪಂದ ವಿಶ್ವ ಬ್ಯಾಡ್ಮಿಂಟನ್‌ನಲ್ಲೇ ಅತ್ಯಧಿಕದ್ದಾಗಿದೆ. ಪ್ರಚಾರ ಮತ್ತು ಕ್ರೀಡಾ ಸಾಮಗ್ರಿಗಳು ಸೇರಿ ಒಟ್ಟಾರೆ 50 ಕೋಟಿ ರೂ. ಮೊತ್ತದ ಒಪ್ಪಂದ ಇದಾಗಿದೆ ಎಂದು ಲಿ ನಿಂಗ್‌ನ ಭಾರತ ಜೊತೆಗಾರ ಬಹುರಾಷ್ಟ್ರೀಯ ಸಂಸ್ಥೆ ಸನ್‌ಲೈಟ್ ಸ್ಪೋರ್ಟ್ಸ್ ಪ್ರೈ.ಲಿ.ನ ನಿರ್ದೇಶಕ ಮಹೇಂದರ್ ಕಪೂರ್ ತಿಳಿಸಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತದ ಮೊದಲ ಮಹಿಳಾ ಬ್ಯಾಡ್ಮಿಂಟನ್ ತಾರೆ ಎಂಬ ಖ್ಯಾತಿ ಪಡೆದಿರುವ ಸಿಂಧು ಕಳೆದ ವರ್ಷ ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ವಿಶ್ವದ ಏಳನೇ ಕ್ರೀಡಾ ಮಹಿಳೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. 2014-15ರಲ್ಲಿ ಲಿ ನಿಂಗ್ ಸಂಸ್ಥೆ ಪಿ.ವಿ ಸಿಂಧು ಜೊತೆ ವಾರ್ಷಿಕ 1.25 ಕೋಟಿ ರೂ. ಒಪ್ಪಂದವನ್ನು ಮಾಡಿಕೊಂಡಿತ್ತು.





