ಫುಟ್ಬಾಲ್ ಆಟಗಾರ ಎಮಿಲಿನೊ ಮೃತದೇಹ ಪತ್ತೆ

ಲಂಡನ್, ಫೆ.8: ಪೋರ್ಟ್ ಲ್ಯಾಂಡ್ ಬಂದರ್‌ಗೆ ಗುರುವಾರ ಅರ್ಜೆಂಟೀನ ಸಂಜಾತ ವೃತ್ತಿಪರ ಫುಟ್ಬಾಲ್ ಆಟಗಾರ ಎಮಿಲಿನೊ ಸಾಲಾ ಮೃತದೇಹವನ್ನು ತಂದ ಬಳಿಕ ಅವರ ಗುರುತನ್ನು ಅಧಿಕೃತವಾಗಿ ಪತ್ತೆ ಹಚ್ಚಲಾಯಿತು ಎಂದು ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.
28ರ ಹರೆಯದ ಎಮಿಲಿನೊ ಜನವರಿ 21 ರಂದು ಕಾರ್ಡಿಫ್ ಸಿಟಿಯ ಪ್ರೀಮಿಯರ್ ಲೀಗ್‌ನ್ನು ಸೇರ್ಪಡೆಯಾಗುವ ಸಲುವಾಗಿ ಸಣ್ಣ ವಿಮಾನವೊಂದರಲ್ಲಿ ತೆರಳುತ್ತಿದ್ದ ವೇಳೆ ವಿಮಾನ ಸಮುದ್ರದಲ್ಲಿ ನಾಪತ್ತೆಯಾಗಿತ್ತು. ರವಿವಾರ ವಿಮಾನದ ಅವಶೇಷ ಪತ್ತೆಯಾಗಿತ್ತು.
ಸಾರ್ವಜನಿಕರಿಂದ ಸಂಗ್ರಹಿಸಿದ್ದ ನಿಧಿಯನ್ನು ಬಳಸಿಕೊಂಡು ಸಮುದ್ರದ ಆಳಕ್ಕಿಳಿದು ಶೋಧ ನಡೆಸಿದಾಗ ವಿಮಾನದ ಅವಶೇಷ ಪತ್ತೆಹಚ್ಚಲಾಗಿತ್ತು. ಮೃತದೇಹವನ್ನು ಬುಧವಾರ ವಶಕ್ಕೆ ಪಡೆಯಲಾಗಿತ್ತು. ‘‘ಇಂದು ಮೃತದೇಹವನ್ನು ಪೋರ್ಟ್‌ಲ್ಯಾಂಡ್ ಪೋರ್ಟ್‌ಗೆ ತರಲಾಗಿದೆ. ಪಾರ್ಥಿವ ಶರೀರವನ್ನು ವೃತ್ತಿಪರ ಫುಟ್ಬಾಲ್ ತಾರೆ ಎಮಿಲಿನೊ ಸಾಲಾರದ್ದು ಎಂದು ಅಧಿಕೃತವಾಗಿ ಗುರುತಿಸಲಾಗಿದೆ. ಎಮಿಲಿನೊ ಹಾಗೂ ಪೈಲಟ್ ಡೇವಿಡ್ ಅವರ ಕುಟುಂಬ ಸದಸ್ಯರು ಅಧಿಕಾರಿಗಳಿಗೆ ನಿರಂತರವಾಗಿ ನೆರವು ನೀಡಿದ್ದರು. ಕಷ್ಟದ ಸಮಯ ಎದುರಿಸುತ್ತಿರುವ ಅವರೊಂದಿಗೆ ನಾವಿದ್ದೇವೆ’’ ಎಂದು ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.





