ರಶ್ಯ ಮೇಲಿನ ನಿಷೇಧ ಹಿಂಪಡೆದ ವಿಶ್ವ ಪ್ಯಾರಾಲಿಂಪಿಕ್ಸ್ ಸಮಿತಿ
ಮಾಸ್ಕೊ, ಫೆ.8: ನಿರ್ದಿಷ್ಟ ಷರತ್ತುಗಳನ್ನು ವಿಧಿಸಿ ರಶ್ಯದ ಪ್ಯಾರಾಲಿಂಪಿಕ್ಸ್ ಸಮಿತಿಗೆ ವಿಧಿಸಲಾಗಿದ್ದ ನಿಷೇಧವನ್ನು ಅಂತರ್‌ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ(ಐಪಿಸಿ)ಶುಕ್ರವಾರ ಹಿಂಪಡೆದಿದೆ.
ರಾಜ್ಯ ಪ್ರಾಯೋಜಕತ್ವದಲ್ಲಿ ಡೋಪಿಂಗ್ ನಡೆಯುತ್ತಿದೆ ಎಂಬ ಆರೋಪ 2016ರ ಆಗಸ್ಟ್ ನಲ್ಲಿ ಕೇಳಿಬಂದಾಗ ರಶ್ಯವನ್ನು ಅಂತರ್‌ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ತಡೆ ಹಿಡಿಯಲಾಗಿತ್ತು. ಈ ಆರೋಪದ ಮೇರೆಗೆ ಅಥ್ಲೆಟಿಕ್ಸ್ ಫೆಡರೇಶನ್ ಹಾಗೂ ಡೋಪಿಂಗ್ ನಿಗ್ರಹ ದಳವನ್ನು ಅಮಾನತುಗೊಳಿಸಲಾಗಿತ್ತು.
‘‘2016ರ ಆಗಸ್ಟ್‌ನಲ್ಲಿ ಐಪಿಸಿ ರಶ್ಯ ಪ್ಯಾರಾಲಿಂಪಿಕ್ಸ್ ಸಮಿತಿ(ಆರ್‌ಪಿಸಿ)ಯನ್ನು ನಿಷೇಧಿಸಲಾಗಿತ್ತು. ಆಗ ನಾವು ಎದುರಿಸುತ್ತಿದ್ದ ಪರಿಸ್ಥಿತಿಯಲ್ಲಿ ಕ್ರೀಡೆಯನ್ನು ಕಳಂಕರಹಿತವಾಗಿಡಲು ಅದು ಅಗತ್ಯ ಹಾಗೂ ಸೂಕ್ತವಾಗಿತ್ತು. 29 ತಿಂಗಳ ಬಳಿಕ ಐಪಿಸಿ ಆಡಳಿತ ಮಂಡಳಿಯು ರಶ್ಯದ ಈಗಿನ ಪರಿಸ್ಥಿತಿಯ ಪ್ರಕಾರ ಆರ್‌ಪಿಸಿಯನ್ನು ನಿಷೇಧಿಸುವುದು ಸರಿಯಲ್ಲ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದೇವೆ’’ಎಂದು ಐಪಿಸಿ ಅಧ್ಯಕ್ಷ ಆ್ಯಂಡ್ರೂ ಪಾರ್ಸನ್ಸ್ ತಿಳಿಸಿದ್ದಾರೆ.





