ಹಣಕಾಸು ಸಮಸ್ಯೆ ಹೊರತಾಗಿಯೂ ಟೋಕಿಯೊ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಶೂಟರ್ ಸರ್ನೊಬಾಟ್
ಹೊಸದಿಲ್ಲಿ,ಫೆ.8: ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಶೂಟರ್ ರಾಹಿ ಸರ್ನೊಬಾಟ್ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಉನ್ನತ ಮಟ್ಟದಲ್ಲಿ ಸ್ಪರ್ಧಿಸುತ್ತಿರುವ ಹೊರತಾಗಿಯೂ ಆರ್ಥಿಕ ಅಭದ್ರತೆ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಮಹಾರಾಷ್ಟ್ರದ ಕೊಲ್ಲಾಪುರದ 28ರ ಹರೆಯದ ಸರ್ನೊಬಾಟ್, ‘‘ಇಷ್ಟೊಂದು ವರ್ಷ ಕಠಿಣ ಶ್ರಮ ಪಟ್ಟಿದ್ದಕ್ಕೆ ನಾನು ಆರ್ಥಿಕವಾಗಿ ಉತ್ತಮ ಸ್ಥಿತಿಯಲಿರ್ಲಬೇಕಾಗಿತ್ತು. ಆದರೆ, ನಾನು ಹಾಗಿಲ್ಲ. ಇನ್ನು ವೃತ್ತಿಪರ ಶೂಟರ್ ಆಗಿ ನಾಲ್ಕು ವರ್ಷಕ್ಕಿಂತ ಹೆಚ್ಚು ಸಮಯ ಇರಲು ಸಾಧ್ಯವಿಲ್ಲ. 12 ವರ್ಷಗಳಿಂದ ದೇಶವನ್ನು ಪ್ರತಿನಿಧಿಸುತ್ತಿರುವ ನನಗೆ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆ ರಾತ್ರಿಯಿಲ್ಲದ ದಿನಗಳನ್ನು ತಂದೊಡ್ಡಿದೆ’’ ಎಂದು ನೋವು ತೋಡಿಕೊಂಡಿದ್ದಾರೆ.
ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಸರ್ನೊಬಾಟ್‌ಗೆ ಮಹಾರಾಷ್ಟ್ರ ಸರಕಾರ 50 ಲಕ್ಷ ಹಾಗೂ ಕ್ರೀಡಾ ಸಚಿವಾಲಯದಿಂದ 20 ಲಕ್ಷ ರೂ. ಬಹುಮಾನ ಲಭಿಸಿತ್ತು. ಆದರೆ, ಅವರು ಬಹುಮಾನದ ಹೆಚ್ಚಿನ ಭಾಗವನ್ನು ವೈಯಕ್ತಿಕ ಕೋಚ್ ಮಂಗೋಲಿಯದ ಮುಂಕ್‌ಬಯರ್ ಡೊರ್ಸುರೆನ್‌ಗೆ ನೀಡಿದ್ದಾರೆ. ರಾಹಿಗೆ ಒಲಿಂಪಿಕ್ಸ್ ಗೋಲ್ಡ್ ಕ್ವೆಸ್ಟ್ ಬೆಂಬಲ ನೀಡುತ್ತಿದೆ. ಮಹಾರಾಷ್ಟ್ರ ರಾಜ್ಯ ಕಂದಾಯ ಇಲಾಖೆಯಲ್ಲಿ ಉಪ ಆಯುಕ್ತರ ಹುದ್ದೆಯಲ್ಲಿದ್ದಾರೆ. ಆದರೆ ಅವರು 2017ರ ಸೆಪ್ಟಂಬರ್‌ನಿಂದ ಕ್ರೀಡಾ ಬದ್ಧತೆಯಿಂದಾಗಿ ಸಂಬಳವಿಲ್ಲದೆ ರಜೆ ಪಡೆದಿದ್ದಾರೆ.







