ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಮಾಸ್ಟರ್ ಮಹಮೂದ್ ನಿಧನ

ಉಡುಪಿ, ಫೆ.9: ಕುಂದಾಪುರ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಹಾಗೂ ಪ್ರಸಕ್ತ ಅಧ್ಯಕ್ಷರಾಗಿದ್ದ ಹಾಜಿ ಮಾಸ್ಟರ್ ಮಹಮೂದ್ (76) ಅಲ್ಪಕಾಲದ ಅಸೌಖ್ಯದಿಂದ ಫೆ. 9ರಂದು ಬೆಳಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಹಾಜಿ ಮೊಹಿದ್ದೀನ್ ಬ್ಯಾರಿ ಹಾಗೂ ಬೀಬಿ ಫಾತಿಮಾ ದಂಪತಿಯ ಹಿರಿಯ ಮಗನಾದ ಇವರು ತನ್ನ ಅಜ್ಜ ಸೂಪಿ ಸಾಹೇಬ್ 1906ರಲ್ಲಿ ಕೋಡಿಯಲ್ಲಿ ಸ್ಥಾಪಿಸಿದ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿದ್ದರು. ಕೋಡಿ ಹಾಗೂ ಸುತ್ತಮುತ್ತಲಿನ ಜನರಿಗೆ ಶಿಕ್ಷಣ ಒದಗಿಸಬೇಕೆಂಬ ಮಹತ್ತರ ಆಶಯ ದೊಂದಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಸುಮಾರು 39 ವರ್ಷಗಳ ಕಾಲ ಅಧ್ಯಕ್ಷರಾಗಿ ಮುನ್ನೆಡೆಸಿದರು.
ಉರ್ದು ಮಾಪಿಳ್ಳೆ ಶಾಲೆಯಿಂದ ಮೊದಲುಗೊಂಡು ಇಂದಿನ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯವರೆಗೆ ಶೈಕ್ಷಣಿಕ ಕ್ಷೇತ್ರದ ಹೆಸರನ್ನು ತಮ್ಮ ಸಹೋದರರ ಸಹಾಕರದೊಂದಿಗೆ ಕಾಪಾಡಿಕೊಂಡು ಬರುವಲ್ಲಿ ಇವರ ಪಾತ್ರ ಪ್ರಮುಖ ವಾಗಿತ್ತು. ಅಂಗನವಾಡಿ ಕೇಂದ್ರವನ್ನು ತಮ್ಮ ಮನೆಯಲ್ಲೇ ತೆರೆದು ತಮ್ಮ ಸ್ವಂತ ಖರ್ಚಿ ನಿಂದ 15 ವರ್ಷಗಳ ಕಾಲ ಮುನ್ನಡೆಸಿಕೊಂಡು ಬಂದಿದ್ದರು. ಶಾಲಾ ಪೂರ್ವ ಶಿಕ್ಷಣದಿಂದ ಹಿಡಿದು ವೃತ್ತಿಪರ ಮಟ್ಟದ ಕೋರ್ಸಿನವರೆಗೆ ಈ ಶಿಕ್ಷಣ ಸಂಸ್ಥೆ ಯನ್ನು ಬೆಳೆಸುವಲ್ಲಿ ಇವರು ಕೂಡ ಕಾರಣೀಕರ್ತರು.
ಸರಳ ಸಜ್ಜನಿಕೆಯೊಂದಿಗೆ ಶ್ವೇತವಸ್ತ್ರಧಾರಿಯಾಗಿದ್ದ ಹಾಜಿ ಮಾಸ್ಟರ್ ಮಿತ ಭಾಷಿ ಹಾಗೂ ಸದಾ ಕಾಯಕಯೋಗಿದ್ದರು. ಶಿಕ್ಷಣ ಕ್ಷೇತ್ರದ ಸೇವೆಯನ್ನು ಗುರುತಿಸಿ ಇವರಿಗೆ 2014ರಲ್ಲಿ ಉಡುಪಿ ಜಿಲ್ಲಾಡಳಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಅದೇ ರೀತಿ ಮಕ್ಕಳ ದಿನಾಚರಣೆ ಪ್ರಯುಕ್ತ ಪುರಸಭೆಯ ವತಿಯಿಂದ ಗೌರವಿಸಲಾಗಿತ್ತು. ಅಲ್ಲದೆ ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಇವರು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಸಹೋದರ ಬ್ಯಾರೀಸ್ ಗ್ರೂಪ್‌ನ ಚೇಯರ್ಮ್ಯಾನ್ ಸೈಯ್ಯದ್ ಮಹಮ್ಮದ್ ಬ್ಯಾರಿ ಸೇರಿದಂತೆ ನಾಲ್ವರು ಸಹೋದರು ಹಾಗೂ ಆರು ಮಂದಿ ಸಹೋದರಿಯರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ರವಿವಾರ ಬೆಳಗ್ಗೆ 10 ಗಂಟೆಗೆ ಕೋಡಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.







